ಬೆಳಗಾವಿ: ರಸ್ತೆ ಬದಿ ನಡೆದು ಹೋಗುತ್ತಿದ್ದವರ ಮೇಲೆ ಮಾರುತಿ ಓಮ್ನಿ ಕಾರು ಹರಿದು ಹೋದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕುಂಭಾರ್ಡ ಗ್ರಾಮದಲ್ಲಿ ನಡೆದಿದೆ.
ಪಾದಚಾರಿಗಳ ಮೇಲೆ ಹಿಂದಿನಿಂದ ಬಂದು ಕಾರು ಅಪ್ಪಳಿಸಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧಾರವಾಡ-ರಾಮನಗರ ರಾಜ್ಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಸೀಮಾ ಹಳನಕರ (27) ಮತ್ತು ರವಳು ಚೌಧರಿ (62) ಮೃತ ದುರ್ದೈವಿಗಳು.
ಗೋವಾದಿಂದ ಹುಬ್ಬಳ್ಳಿಯತ್ತ ಹೊರಟಿದ್ದ ಮಾರುತಿ ಓಮ್ನಿ ಕುಂಭರ್ಡಾ ಗ್ರಾಮದ ಬಳಿ ವೇಗವಾಗಿ ಬಂದು ನಡೆದು ಹೋಗುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದು, ಅವರ ಮೇಲೆ ಹರಿದು ಹೋಗಿದೆ.
ಅಪಘಾತದ ಬಳಿಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ ಓಮ್ನಿ ಚಾಲಕ, ಗೋವಾದ ಫೋಂಡಾ ನಿವಾಸಿ ಇರ್ಫಾನ್ ಮುಲ್ಲಾ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ