ದುಬೈ: ಮೊಹ್ಸಿನ್ ನಖ್ವಿ ಏಷ್ಯಾ ಕಪ್ ಟ್ರೋಫಿಯನ್ನು ಯುಎಇ ಕ್ರಿಕೆಟ್ ಮಂಡಳಿಗೆ ಹಸ್ತಾಂತರಿಸಿದ್ದಾರೆ. ಇದರೊಂದಿಗೆ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದೆ.
ಏಷ್ಯಾ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಏಷ್ಯಾ ಕಪ್ 2025 ಟ್ರೋಫಿಯನ್ನು ಯುಎಇ ಕ್ರಿಕೆಟ್ ಮಂಡಳಿಗೆ ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ.
ಭಾರತ 2025 ರ ಏಷ್ಯಾ ಕಪ್ ಗೆದ್ದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಅಧ್ಯಕ್ಷ) ಮತ್ತು ದೇಶದ ಆಂತರಿಕ ಸಚಿವರೂ ಆಗಿರುವ ನಖ್ವಿ ಅವರಿಂದ ಟ್ರೋಫಿಯನ್ನು ಪಡೆಯಲು ಭಾರತ ನಿರಾಕರಿಸಿತ್ತು. ನಖ್ವಿ ಟ್ರೋಫಿಯನ್ನು ತೆಗೆದುಕೊಂಡು ಹೋಗಿದ್ದರು.
ಏಷ್ಯಾ ಕಪ್ ಫೈನಲ್ ಪಂದ್ಯದ ಎರಡು ದಿನಗಳ ನಂತರ ಸೆಪ್ಟೆಂಬರ್ 30 ರಂದು ಎಸಿಸಿ ತನ್ನ ಸಭೆಯನ್ನು ವರ್ಚುವಲ್ ಆಗಿ ಕರೆದಿತ್ತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ(ಬಿಸಿಸಿಐ) ರಾಜೀವ್ ಶುಕ್ಲಾ ಮತ್ತು ಆಶಿಶ್ ಶೆಲಾರ್ ಭಾರತವನ್ನು ಪ್ರತಿನಿಧಿಸಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಸಭೆಯಲ್ಲಿ ಮೊಹ್ಸಿನ್ ನಖ್ವಿ ಬಿಸಿಸಿಐಗೆ ಕ್ಷಮೆಯಾಚಿಸಿದ್ದಾರೆ. ಈಗ ಟ್ರೋಫಿ ಹಸ್ತಾಂತರಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಫೈನಲ್ ಪಂದ್ಯದ ಕೊನೆಯಲ್ಲಿ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ಭಾರತ ನಿರಾಕರಿಸಿತ್ತು. ವೈಯಕ್ತಿಕ ಪ್ರಶಸ್ತಿಗಳನ್ನು ಹೊರತುಪಡಿಸಿ, ಭಾರತೀಯ ಆಟಗಾರರಲ್ಲಿ ಯಾರೂ ಟ್ರೋಫಿಯನ್ನು ಪಡೆಯಲು ವೇದಿಕೆಯತ್ತ ನಡೆಯಲಿಲ್ಲ. ನಂತರ, ನಖ್ವಿ ವಿಜೇತರ ಪದಕ ಮತ್ತು ಟ್ರೋಫಿಯೊಂದಿಗೆ ಹೊರನಡೆದರು, ಇದು ಭಾರಿ ವಿವಾದಕ್ಕೆ ಕಾರಣವಾಯಿತು.