ಭೋಪಾಲ್: ಮಧ್ಯಪ್ರದೇಶದ 27 ಮದರಸಾಗಳಲ್ಲಿ 556 ಹಿಂದೂ ಮಕ್ಕಳ ಬಲವಂತದ ಧಾರ್ಮಿಕ ಮತಾಂತರ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರಕ್ಕೆ ಎನ್.ಹೆಚ್.ಆರ್.ಸಿ. ನೋಟಿಸ್ ನೀಡಿದ್ದು, 15 ದಿನಗಳಲ್ಲಿ ವಿವರವಾದ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಮಧ್ಯಪ್ರದೇಶ ರಾಜ್ಯದ ಹಲವಾರು ಮದರಸಾಗಳು ಮುಸ್ಲಿಮೇತರ ಮಕ್ಕಳನ್ನು ಕುರಾನ್ ಅಧ್ಯಯನ ಮಾಡಲು ಒತ್ತಾಯಿಸುತ್ತಿವೆ. ಇಸ್ಲಾಂ ಧರ್ಮ ಸೇರಲು ಒತ್ತಡ ಹೇರುತ್ತಿವೆ ಎಂದು ದೂರಲಾಗಿದೆ.
ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ತನಿಖೆ ನಡೆಸುವಂತೆ ನಿರ್ದೇಶಿಸಲಾಗಿದೆ. ಸೆ. 26ರಂದು ಎನ್.ಹೆಚ್.ಆರ್.ಸಿ.ಗೆ ಈ ಕುರಿತಾಗಿ ದೂರು ಬಂದಿತ್ತು. ಸರ್ಕಾರದ ಅನುಮೋದನೆ ಪಡೆದುಕೊಳ್ಳದೆ ಕಾರ್ಯನಿರ್ವಹಿಸುವ ಮದರಸಾಗಳಲ್ಲಿ ಮುಸ್ಲಿಂ ಮಕ್ಕಳ ಪ್ರವೇಶದ ಬಗ್ಗೆ ಎನ್.ಹೆಚ್.ಆರ್.ಸಿ. ಗಂಭೀರ ಪ್ರಶ್ನೆ ಎತ್ತಿದ್ದು, ಭೋಪಾಲ್, ಔಶಂಗಾಬಾದ್, ಜಬಲ್ಪುರ, ಬರ್ದಾನಿ, ಖಾಂಡ್ಲಾ ಮೊದಲಾದ ಜಿಲ್ಲೆಗಳಲ್ಲಿ ಹಿಂದೂ ಮಕ್ಕಳನ್ನು ಮತಾಂತರ ಮಾಡಿರುವುದು ಕಂಡು ಬಂದಿದೆ.
ಅನುಮೋದನೆ ಇಲ್ಲದೆ ಧಾರ್ಮಿಕ ಶಿಕ್ಷಣ ನೀಡುವುದನ್ನು ನಿಷೇಧಿಸಲಾಗಿದೆ. ಅಂತಹ ಮಕ್ಕಳನ್ನು ಸಂಸ್ಥೆಗಳಿಂದ ಕೂಡಲೇ ಬಿಡುಗಡೆ ಮಾಡಬೇಕು. ಅನುಮೋದನೆ ಪಡೆಯದ ಮದರಸಾಗಳ ವಿರುದ್ಧ ಮೊಕದ್ದಮೆ ದಾಖಲಿಸಬೇಕೆಂದು ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.