ಬೆಂಗಳೂರು: ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬವಾದ ಹಿನ್ನೆಲೆಯಲ್ಲಿ 2025- 26 ನೇ ಸಾಲಿನ ಪದವಿ ಮತ್ತು ಸ್ನಾತಕೋತ್ತರ ಪದವಿ ವೇಳಾಪಟ್ಟಿಯನ್ನು ಉನ್ನತ ಶಿಕ್ಷಣ ಇಲಾಖೆ ಪರಿಷ್ಕರಣೆ ಮಾಡಿದೆ.
25 ಸಾರ್ವಜನಿಕ ವಿಶ್ವವಿದ್ಯಾಲಯಗಳು, 440 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪಠ್ಯ ಬೋಧನೆಗೆ ಒಂದೆರಡು ತಿಂಗಳು ಹೆಚ್ಚಿನ ಕಾಲಾವಕಾಶ ನೀಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ವಿವಿಗಳಿಗೆ ಬೇರೆಯಾಗಿ ನಿಗದಿಪಡಿಸಲಾಗಿದೆ.
ಮೈಸೂರು ವಿವಿ ಆರಂಭಿಕ ಸೆಮಿಸ್ಟರ್ ಅವಧಿ ಜುಲೈ 30 ರಿಂದ ಅಕ್ಟೋಬರ್ 23ರ ವರೆಗೆ ಇತ್ತು. ಇದನ್ನು ನವೆಂಬರ್ 22 ರವರೆಗೆ ವಿಸ್ತರಿಸಲಾಗಿದೆ. ಇದೇ ರೀತಿ ಪ್ರತಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಅವಧಿ ಪ್ರಾರಂಭವಾಗುವ ದಿನಾಂಕದ ಆಧಾರದ ಮೇಲೆ ಮುಕ್ತಾಯದ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.
ಸರ್ಕಾರಿ ಪದವಿ ಕಾಲೇಜುಗಳಿಗೆ ಕಳೆದ ಸಾಲಿನಲ್ಲಿ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನೇ ತಾತ್ಕಾಲಿಕವಾಗಿ ಹಾಲಿ ಸೆಮಿಸ್ಟರ್ ಅವಧಿಗೆ ಮುಂದುವರೆಸುವಂತೆ ಸರ್ಕಾರ ಸೂಚನೆ ನೀಡಿದೆ.