ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಗೆ ಹೆಚ್ಚುವರಿ ಹಾಸಿಗೆ, ತಲೆದಿಂಬು ಸೇರಿದಂತೆ ಇತರ ಸೌಲಭ್ಯ ನೀಡದಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಬೆಂಗಳೂರಿನ 57 ನೇ ಸಿವಿಲ್ ಕೋರ್ಟ್ ನಡೆಸಿದೆ.
ಕೋರ್ಟ್ ಆದೇಶದ ಹೊರತಾಗಿಯೂ ದರ್ಶನ್ ಗೆ ಯಾವುದೇ ಸವಲತ್ತುಗಳನ್ನು ಜೈಲಧಿಕಾರಿಗಳು ನೀಡಿಲ್ಲ. ಈ ಮೂಲಕ ಕೋರ್ಟ್ ಆದೇಶ ಉಲ್ಲಂಘನೆಯಾಗಿದೆ ಎಂದು ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಎರಡೂ ಕಡೆಯ ವಕೀಲರ ವಾದ-ಪ್ರತಿವಾದ ಆಲಿಸಿತು.
ಜೈಲಿನ ನಿಯಮದ ಪ್ರಕಾರ ನಡೆದುಕೊಳ್ಳಲಾಗಿದೆ ಎಂದು ಸರ್ಕಾರಿ ವಕೀಲರು ವಾದ ಮಂಡಿಸಿದ್ದಾರೆ. ಈ ವೇಳೆ ದರ್ಶನ್ ಪರ ವಕೀಲ ಸುನಿಲ್, ಕೋರ್ಟ್ ಆದೇಶ ನೀಡಿದರೂ ದರ್ಶನ್ ಗೆ ಯಾವುದೇ ಸವಲತ್ತು ನೀಡುತ್ತಿಲ್ಲ. ರೇಪಿಸ್ಟ್ ಉಮೇಶ್ ರೆಡ್ದಿಗೆ ಜೈಲಲ್ಲಿ ಕಲರ್ ಟಿವಿ ಕೊಡಲಾಗಿದೆ. ದರ್ಶನ್ ಬೆನ್ನುನೋವಿನಿಂದ ಬಳಲುತ್ತಿದ್ದರೂ ಹೆಚ್ಚುವರಿ ಹಾಸಿಗೆ, ತಲೆದಿಂಬು ಯಾವುದೇ ಸೌಲಭ್ಯ ನೀಡಿಲ್ಲ. ಇಡೀ ದೇಶದಲ್ಲಿಯೇ ಪಾಲನೆಯಾಗದಿರುವ ನಿಯಮ ದರ್ಶನ್ ಗೆ ಅನ್ವಯವಾಗಿದೆ. ಕೋರ್ಟ್ ಆದೇಶವನ್ನು ಕೂಡ ಪಾಲಿಸದಿರುವುದು ನೋವುಂಟು ಮಾಡಿದೆ ಎಂದು ವಾದ ಮಂಡಿಸಿದ್ದಾರೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಅರ್ಜಿ ವಿಚಾರಣೆಯ ಆದೇಶ ಅಕ್ಟೋಬರ್ 9ಕ್ಕೆ ಕಾಯ್ದಿರಿಸಿದೆ.