ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಈರುಳ್ಳಿ ಹಾನಿಯಾಗಿ ಉತ್ಪಾದನೆ ಕಡಿಮೆಯಾಗಿದೆ. ಹೀಗಿದ್ದರೂ ಈರುಳ್ಳಿ ದರ ಭಾರಿ ಕುಸಿತವಾಗಿದೆ. ಬೆಲೆ ಕುಸಿತದಿಂದಾಗಿ ರೈತರು ಕಂಗಲಾಗಿದ್ದಾರೆ.
ರಾಜ್ಯದ ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರ, ಚಿತ್ರದುರ್ಗ, ಗದಗ, ಹಾವೇರಿ, ವಿಜಯನಗರ, ಕೊಪ್ಪಳ ಸೇರಿ ಅನೇಕ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ಕೇಳುವವರಿಲ್ಲದಂತಾಗಿದ್ದು, ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹುಬ್ಬಳ್ಳಿ ಎಪಿಎಂಸಿಯಲ್ಲಿ ಸೋಮವಾರ ಒಂದು ಕ್ವಿಂಟಾಲ್ ಈರುಳ್ಳಿ ದರ 500 ರೂಪಾಯಿ ಆಸುಪಾಸಿನಲ್ಲಿತ್ತು. ಬೆಲೆ ಕುಸಿತದ ಕಾರಣಕ್ಕೆ ರೈತರೊಬ್ಬರು ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ್ದಾರೆ. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ತಳಕಲ್ಲು ಗ್ರಾಮದ ರೈತ ಬಾಬುಸಾಬ್ ಈರುಳ್ಳಿ ಮಾರಾಟದಿಂದ ಬರುವ ಹಣ ಈರುಳ್ಳಿ ಕಟಾವು ಮಾಡಿದ ಕೂಲಿ ಕಾರ್ಮಿಕರಿಗೆ ನೀಡಲು ಸಾಕಾಗುವುದಿಲ್ಲ ಎನ್ನುವ ಕಾರಣಕ್ಕೆ ಬೆಲೆ ನಾಶ ಮಾಡಿದ್ದಾರೆ.