ಬೆಂಗಳೂರು: ಸಿಸಿ, ಓಸಿ ಇಲ್ಲದೇ ನಿರ್ಮಿಸಿದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡುವಲ್ಲಿ ಎದುರಾಗಿರುವ ಸಮಸ್ಯೆ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಮಹತ್ವದ ಸಭೆ ನಡೆಸಲಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಕಾರಣ ನೀಡಿ ಮಾರ್ಚ್ ತಿಂಗಳಿನಿಂದ ಓಸಿ, ಸಿಸಿ ಇಲ್ಲದ ಕಟ್ಟಡಗಳಿಗೆ ಬೆಸ್ಕಾಂ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ರಾಜ್ಯ ಸರ್ಕಾರ ಈ ಗೊಂದಲ ಬಗೆಹರಿಸಲು 1200 ಚದರಡಿ ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಾಣವಾಗುವ ಮನೆಗಳಿಗೆ ಓಸಿ ಕಡ್ಡಾಯವಲ್ಲ ಎಂದು ಕಾಯ್ದೆ ತಂದಿದೆ.
ಬೆಂಗಳೂರಿನಲ್ಲಿ ಈಗಾಗಲೇ ನಿರ್ಮಿಸಿದ 1,200 ಚದರಡಿಗಿಂತ ಕಡಿಮೆ ವಿಸ್ತೀರ್ಣದ ಕಟ್ಟಡಗಳಿಗೆ ಕಟ್ಟಡವಾರು ಪರಿಶೀಲನೆ ನಡೆಸಿ ಓಸಿಯಿಂದ ಒಂದು ಬಾರಿಗೆ ಅನ್ವಯವಾಗುವಂತೆ ದಂಡ ಸಂಗ್ರಹಿಸಿ ವಿನಾಯಿತಿ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಹೇಳಲಾಗಿದೆ.
ಇದರೊಂದಿಗೆ 1200 ಚದರಡಿಗಿಂತ ಹೆಚ್ಚು ವಿಸ್ತೀರ್ಣದಲ್ಲಿ ನಿರ್ಮಾಣವಾದ ಕಟ್ಟಡಗಳಿಗೂ ಒಂದು ಬಾರಿಗೆ ಅನ್ವಯವಾಗುವಂತೆ ಓಸಿಯಿಂದ ವಿನಾಯಿತಿ ನೀಡಿ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ಚರ್ಚೆ ನಡೆದಿದೆ. ಈ ಬಗ್ಗೆ ತೀರ್ಮಾನಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಮುಖ್ಯ ಕಾರ್ಯದರ್ಶಿ ನೇತೃತ್ವದ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.
ದಸರಾ ಹಬ್ಬದ ವೇಳೆ ಉಡುಗೊರೆಯಾಗಿ ಓಸಿ ಇಲ್ಲದ ಕಟ್ಟಡಗಳಿಗೂ ವಿದ್ಯುತ್ ಸಂಪರ್ಕದ ಸಿಹಿ ಸುದ್ದಿ ನೀಡಲಿದ್ದಾರೆ ಎನ್ನುವ ನೀರಿಕ್ಷೆ ಇದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 1200 ಚದರಡಿಗಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡಗಳಿಗೆ ಸ್ವಾದೀನಾನುಭವ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಬೇಕೆಂದು ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು.
ಸಿಸಿ ಮತ್ತು ಓಸಿ ಸಮಸ್ಯೆಯಿಂದಾಗಿ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ 3.40 ಲಕ್ಷ ಕಟ್ಟಡಗಳಿಗೆ ವಿದ್ಯುತ್ ನೀಡಿಲ್ಲ. ಹೀಗಾಗಿ ಇಂದಿನ ಸಭೆ ಕುತೂಹಲ ಮೂಡಿಸಿದೆ. ವಿದ್ಯುತ್ ಸಂಪರ್ಕ ನೀಡಲು ಪೂರಕವಾಗಿ ಇಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.