ಮಂಗಳೂರು: ಪುತ್ತೂರಿನ ಬಿಜೆಪಿ ಮುಖಂಡನ ಪುತ್ರನ ಲವ್-ಸೆಕ್ಸ್-ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಡಿಎನ್ ಎ ವರದಿಯಲ್ಲಿ ಸತ್ಯ ಬಯಲಾಗಿದೆ. ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಗರ್ಭವತಿಯನ್ನಾಗಿ ಮಾಡಿ ಕೈಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕೃಷ್ಣ ಜೆ ರಾವ್ ಡಿಎನ್ ಎ ವರದಿ ಪಾಸಿಟಿವ್ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ ರಾವ್, ಯುವತಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಗರ್ಭವತಿಯನ್ನಾಗಿ ಮಾಡಿ ಮೋಸ ಮಾಡಿದ್ದ. ಯುವತಿ ಕೆಲ ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಇದೀಗ ಈ ಪ್ರಕರಣ ಮಹತ್ವದ ಘಟ್ಟ ತಲುಪಿದೆ. ಯುವತಿಗೆ ಕೈಕೊಟ್ಟು ಪರಾರುಯಾಗಿದ್ದ ಕೃಷ್ಣ ಜೆ ರಾವ್, ತಾನು ಮಗುವಿನ ತಂದೆ ಎಂಬುದನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಯುವತಿಯನ್ನು ಮದುವೆಯಾಗಲು ನಿರಾಕರಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಕೋರ್ಟ್ ನಲ್ಲಿ ಆರೋಪಿ ಕೃಷ್ಣ ಜೆ ರಾವ್ ನ ರಕ್ತದ ಮಾದರಿ ಸಂಗ್ರಹಿಸಿ ಡಿಎನ್ ಎ ಪರೀಕ್ಷೆಗೆ ರವಾನಿಸಿದ್ದರು.
ಇದೀಗ ಡಿಎನ್ ಎ ವರದಿ ಬಂದಿದ್ದು, ವರದಿಯಲ್ಲಿ ಆರೋಪಿ ಕೃಷ್ಣ ಜೆ ರಾವ್ ನೇ ಮಗುವಿನ ತಂದೆ ಎಂಬುದು ಸಾಬೀತಾಗಿದೆ. ಸಂತ್ರಸ್ತೆಯ ಕುಟುಂಬದವರು ಯುವತಿಯನ್ನು ಈಗಲಾದರೂ ಕೃಷ್ಣ ರಾವ್ ಮದುವೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಯುವತಿ ಕುಟುಂಬದ ಪರವಾಗಿ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ ಕೂಡ ನಿಂತಿದ್ದು, ಕಳೆದ ಕೆಲ ತಿಂಗಳುಗಳಿಂದ ಸಂತ್ರಸ್ತ ಯುವತಿಯ ಕುಟುಮ್ಬ ಕಾನೂನು ಹೋರಾಟ ನಡೆಸುತ್ತಿತ್ತು. ಪುತ್ತೂರು ನ್ಯಾಯಾಧೀಶರ ಸಮ್ಮುಖದಲ್ಲಿ ಆರೋಪಿ ಕೃಷ್ಣ ರಾವ್ ಹಾಗೂ ಸಂತ್ರಸ್ತೆ ಹಾಗೂ ಮಗುವಿನ ರಕ್ತ ಸಂಗ್ರಹಿಸಲಾಗಿತ್ತು. ಬಳಿಕ ಬೆಂಗಳುರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಡಿಎನ್ ಎ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿದ್ದು, ಮಗುವಿನ ತಂದೆ ಕೃಷ್ಣ ರಾವ್ ಎಂಬುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ಮುಂದೆ ನಿಂತು ಇಬ್ಬರ ಮದುವೆ ಮಾಡಿಸಬೇಕು. ನಮಗೆ ಕಾನೂನು ಹೋರಾಟ ಇಷ್ಟವಿಲ್ಲ. ಇಬ್ಬರೂ ಒಂದಾಗಿ ಬಾಳಬೇಕು ಎಂಬುದು ನಮ್ಮ ಇಚ್ಛೆ. ಹಿಂದೂತ್ವದ ಭದ್ರ ಕೋಟೆ ಪುತ್ತೂರಿನಲ್ಲಿ ಹಿಂದೂ ಮುಖಂಡರು ಮುಂದೆ ಬಂದು ಎರಡು ಕುಟುಂಬಗಳನ್ನು ಒಂದು ಮಾಡಿ ಮದುವೆ ಮಾಡಿಸಲಿ ಎಂದು ತಿಳಿಸಿದ್ದಾರೆ.