ಮಂಗಳೂರು: ಕಡಲನಗರಿ ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ ದಿಢೀರ್ ರದ್ದುಗೊಂಡಿರುವ ಘಟನೆ ನಡೆದಿದೆ.
ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದಾಗಿ ರದ್ದಾಗಿದ್ದು, ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಇಂದು ಬೆಳಿಗ್ಗೆ 8:50ಕ್ಕೆ ವಿಮಾನ ಹಾರಾಟವಾರಂಭವಾಗಬೇಕಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಹಾರಾಟ ಸ್ಥಗಿತಗೊಂಡಿದೆ.
ಆರಂಭದಲ್ಲಿ ವಿಮಾನಯಾನ ಸಿಬ್ಬಂದಿ ಒಂದು ಗಂಟೆ ತಡವಾಗಿ ವಿಮಾನ ಹೊರಡಲಿದೆ ಎಂದು ಮಾಹಿತಿ ನೀಡಿದ್ದರು. ಬಳಿಕ ಮಧ್ಯಾಹ್ನ 3:30ಕ್ಕೆ ಫ್ಲೈಟ್ ಟೇಕ್ ಆಫ್ ಆಗಲಿದೆ ಎಂದು ಹೇಳಿದ್ದರು. ಆದರೆ ಆ ಸಮಯ ಮುಗಿದರೂ ವಿಮಾನ ಟೇಕ್ ಆಫ್ ಆಗುವ ಲಕ್ಷಣ ಕಂಡುಬಂದಿಲ್ಲ. ಈ ವೇಳೆ ವಿಚಾರಿಸಿದಾಗ 4 ಗಂಟೆಗೆ ವಿಮಾನ ಹಾರಾಟ ನಡೆಸಲಿದೆ ಎಂದಿದ್ದಾರೆ.
ಸಂಜೆಯಾದರೂ ವಿಮಾನ ದೈಬೈಗೆ ಹಾರಾಟ ನಡೆಸಿಲ್ಲ. ಬಳಿಕ ಸಂಜೆ 6 ಗಂಟೆಗೆ ಸಮಯ ನಿಗದಿ ಮಾಡಲಾಗಿದೆ ಎಂದು ಹೇಳಿ ವಿಮಾನ ಹಾರಾಟ ರದ್ದು ಪಡಿಸಲಾಗಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಪ್ರಯಾಣಿಕರು ಹೈರಾಣಾಗಿದ್ದಾರೆ.