ಮಂಗಳೂರು: ಯಾವುದೇ ದೇವಸ್ಥಾನದ ಹಣ ಸರ್ಕಾರದ ಖಜಾನೆಗೆ ಬರುವುದಿಲ್ಲ, ಒಂದು ದೇವಸ್ಥಾನದ ಹಣ ಮತ್ತೊಂದು ದೇವಸ್ಥಾನಕ್ಕೂ ಕೊಡಲಾಗಲ್ಲ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನದ ಆದಾಯ ಬಳಕೆ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯವರಿಗೆ ಮಾಡುವುದಕ್ಕೆ ಬೇರೆ ಕೆಲಸ ಇಲ್ಲ ಎಂದು ಟಾಂಗ್ ಕೊಟ್ಟಿದಾರೆ.
ಬಿಜೆಪಿಯವರಿಗೆ ಕಾನೂನಿನ ಅರಿವಿದೆ. ಆದರೆ ರಾಜಕಾರಣಕ್ಕಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ದರ ಏರಿಕೆ ಬಗ್ಗೆ ಹಾಕಿದ್ದಾರೆ. ದೇವಸ್ಥಾನಗಳ ಹಣ ಗ್ಯಾರಂಟಿಗೆ ಬಳಸುತ್ತಿದ್ದಾರೆ ಎಂದು ಹಾಕಿಕೊಂಡಿದ್ದಾರೆ. ಬಿಜೆಪಿಯವರು ಕೆಟ್ಟ ಜನ, ಅವರಿಗೆ ಚೇಷ್ಟೆ ಮಾಡದಿದ್ದರೆ ನಿದ್ದೆನೇ ಬರುವುದಿಲ್ಲ. ಬಿಜೆಪಿ ಅವಧಿಯಲ್ಲಿ 24 ದೇವಾಲಯಗಳ ಸೇವಾ ದರ ಪರಿಷ್ಕರಣೆಯಾಗಿದೆ. ನಮ್ಮ ಅವಧಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಸೇರಿದಂತೆ 14 ದೇವಸ್ಥಾನಗಳ ಸೇವಾದರ ಪರಿಷ್ಕರಿಸಲಾಗಿದೆ ಎಂದು ಹೇಳಿದ್ದಾರೆ.