ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಚುರುಕುಗೊಂಡಿದ್ದು, ಮೂರು ದಿನದಲ್ಲಿ 1.93 ಲಕ್ಷ ಜನರ ಸಮೀಕ್ಷೆ ನಡೆಸಲಾಗಿದೆ. ಪ್ರತಿದಿನ ಸರಾಸರಿ 10 ಲಕ್ಷ ಜನರ ಸಮೀಕ್ಷೆ ನಡೆಸುವ ಗುರಿ ಇದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷೆ ಆ್ಯಪ್ ಮತ್ತು ಸರ್ವರ್ ಸೇರಿ ಕೆಲವು ಸಮಸ್ಯೆಗಳು ಇದ್ದು, ಇವುಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ತೊಂದರೆ ನಿವಾರಣೆಯಾಗಿ ಸಮೀಕ್ಷೆ ವೇಗ ಪಡೆದುಕೊಳ್ಳಲಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರ ಸೌಲಭ್ಯ ಕಲ್ಪಿಸಲು ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಸಮೀಕ್ಷೆಗಾಗಿ 60 ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದ್ದು, ಇದರಲ್ಲಿ ಜಾತಿ ಪ್ರಶ್ನೆ ಒಂದಾಗಿದೆ. ಆದರೆ ಇದು ಜಾತಿ ಜನಗಣತಿಯಲ್ಲ, ವಿಪಕ್ಷಗಳಿಗೆ ಚರ್ಚಿಸಲು ಬೇರೆ ವಿಚಾರಗಳಿಲ್ಲದ ಕಾರಣ 59 ಮಹತ್ವದ ಪ್ರಶ್ನೆಗಳ ಬಗ್ಗೆ ಚರ್ಚಿಸದೇ ಜಾತಿ ಪ್ರಶ್ನೆ ಬಗ್ಗೆ ಮಾತ್ರ ಚರ್ಚಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.