ಬೆಂಗಳೂರು: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಬಂಧ ತಮ್ಮ ವಿರುದ್ಧ ಬೆಂಗಳೂರಿನ ಸಿಐಡಿ ಪೊಲೀಸ್ ಠಾಣೆ ಮತ್ತು ಹಾಸನದ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರತ್ಯೇಕ ಎರಡು ಪ್ರಕರಣಗಳ ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಬೇರೊಂದು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲು ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವೈಜಾಗೊಳಿಸಿದೆ.
82ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಪಕ್ಷಪಾತ ಮತ್ತು ಪೂರ್ವಾಗ್ರಹ ಪೀಡಿತ ಧೋರಣೆ ಹೊಂದಿದ್ದಾರೆ. ಇದರಿಂದ ಪ್ರಕರಣ ವರ್ಗಾಯಿಸಬೇಕು ಎಂದು ಕೋರಿದ ಅರ್ಜಿ ಬೆಂಗಳೂರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದ್ದು, ಇದನ್ನು ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಹೈಕೋರ್ಟ್ ಮೊರೆ ಹೋಗಿದ್ದರು.
ಬುಧವಾರ ವಿಚಾರಣೆ ನಡೆಸಿದ ಹೈಕೋರ್ಟ್, ಕೆಲವು ಅವಲೋಕನ ಕಠಿಣವೆಂದು ಅನಿಸಿದರೂ ಪಕ್ಷಪಾತದ ನಡೆ ಎನ್ನಲಾಗದು ಎಂದು ಅಭಿಪ್ರಾಯಪಟ್ಟು ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ.