ಬೆಂಗಳೂರು: ಇ- ಖಾತಾ ಅರ್ಜಿ ಸಲ್ಲಿಕೆಯನ್ನು ಮತ್ತಷ್ಟು ಸರಳ, ಸುಲಭಗೊಳಿಸುವ ಸಲುವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಶೀಘ್ರವೇ ಇ-ಖಾತಾ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲು ಮುಂದಾಗಿದೆ.
ತ್ವರಿತವಾಗಿ ಇ-ಖಾತಾ ವಿತರಣೆ ಕಾರ್ಯ ಆರಂಭಿಸಲಾಗಿದ್ದು, ಬೆಂಗಳೂರು ಒನ್ ಕೇಂದ್ರ ಹಾಗೂ ಸೈಬರ್ ಸೆಂಟರ್ ಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ವೆಬ್ ಆಧಾರಿತ ತಂತ್ರಾಂಶ ರೂಪಿಸಲಾಗಿತ್ತು. ಇದೀಗ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತಷ್ಟು ಸರಳಗೊಳಿಸುವ ಉದ್ದೇಶದಿಂದ ಇ-ಖಾತಾ ಆಸ್ತಿ ಮೊಬೈಲ್ ಆ್ಯಪ್ ಸಿದ್ದಪಡಿಸಲಾಗುತ್ತಿದೆ. 10 ದಿನದಲ್ಲಿ ಈ ಆ್ಯಪ್ ಕಾರ್ಯಾಚರಣೆ ಆರಂಭಿಸಲಿದೆ.
ಬಳಿಕ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಆಪ್ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆಸ್ತಿ ಮಾಲೀಕರು ಮಾತ್ರವಲ್ಲದೆ, ಅವರ ಪರವಾಗಿ ಇತರರು ತಮ್ಮ ಮೊಬೈಲ್ ನಲ್ಲಿ ಆ್ಯಪ್ ಡೌನ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು.
ಅಂತಿಮ ಇ-ಖಾತಾ ಪಡೆದುಕೊಳ್ಳಲು ಆಸ್ತಿ ಮಾರಾಟದ ಕರಾರು ಸಂಖ್ಯೆ, ಆಸ್ತಿ ತೆರಿಗೆ ರಶೀದಿ, ಮಾಲೀಕರ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಆಸ್ತಿಯ ಇಸಿ, ಫೋಟೋ, ಲೊಕೇಷನ್, ಬೆಸ್ಕಾಂ ಬಿಲ್ ಸಂಖ್ಯೆ ನೀಡಬೇಕಿದೆ.