ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ರೋಗ ಪತ್ತೆ ಸೇವೆ ಸೌಲಭ್ಯ ಪಡೆದುಕೊಳ್ಳುತ್ತಿದ್ದ ಎಪಿಎಲ್ ಕಾರ್ಡ್ ಹೊಂದಿದವರಿಗೆ ಶೇಕಡ 70 ರಷ್ಟು ಶುಲ್ಕ ಪಾವತಿ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಇದುವರೆಗೆ ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಸಿಟಿ, ಎಂ.ಆರ್.ಐ. ಸ್ಕ್ಯಾನ್ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ, ಜುಲೈನಲ್ಲಿ ಶುಲ್ಕ ಪಾವತಿ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಸೆ. 23ರ ಮಂಗಳವಾರದಿಂದಲೇ ಎಪಿಎಲ್ ಕಾರ್ಡ್ ದಾರರಿಗೆ ಶುಲ್ಕ ಪಾವತಿ ಮಾಡಿ ಸೇವೆ ಪಡೆಯುವುದನ್ನು ಕಡ್ಡಾಯಗೊಳಿಸಿ ಜಿಲ್ಲಾ ಆಸ್ಪತ್ರೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಐಟಿ ವಿಭಾಗದ ಮೂಲಕ ಲಾಜಿಸ್ಟಿಕ್ ಅನುಷ್ಠಾನ ಮಾಡುವುದನ್ನು ಕಡ್ಡಾಯಗೊಳಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಸೆ. 18ರಂದೇ ಈ ಆದೇಶ ಹೊರಡಿಸಲಾಗಿದ್ದು, ಸೆ. 23ರಿಂದ ಕಡ್ಡಾಯವಾಗಿ ಎಪಿಎಲ್ ಕಾರ್ಡ್ ದಾರರು ಶೇಕಡ 70/ 30ರ ಪ್ರಕಾರ ಆನ್ಲೈನ್ ಹಾಗೂ ಆಫ್ಲೈನ್ ಪಾವತಿ ಮೂಲಕ ಪಡೆದುಕೊಳ್ಳಬಹುದಾಗಿದೆ.
ದಾವಣಗೆರೆ, ಚಾಮರಾಜನಗರ, ಚಿಕ್ಕಮಗಳೂರು, ವಿಜಯಪುರ, ಚಿತ್ರದುರ್ಗ, ಉಡುಪಿ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಯಾದಗಿರಿ, ಕೊಡಗು, ತುಮಕೂರು, ಕೋಲಾರ, ಕಾರವಾರ ಜಿಲ್ಲಾ ಆಸ್ಪತ್ರೆಗಳು ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಿಟಿ, ಎಂಆರ್‌ಐ ಸ್ಕ್ಯಾನ್ ಗೆ ಎಪಿಎಲ್ ಕಾರ್ಡ್ ದಾರರು ಶುಲ್ಕ ಭರಿಸಿ ಸೇವೆ ಪಡೆಯಬೇಕಿದೆ ಎಂದು ಹೇಳಲಾಗಿದೆ.