ತುಮಕೂರು: ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಜಾತಿ ಗಣತಿಯಲ್ಲಿ ವಿವಿಧ ಜಾತಿಗಳ ಮುಂದೆ ಕ್ರಿಶ್ಚಿಯನ್ ಎಂದು ಬರೆದಿರುವುದು ಸರ್ಕಾರ ಮತಾಂತರಕ್ಕೆ ಪ್ರೋತ್ಸಾಹ ನೀಡಿದಂತೆ ಎಂದು ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಕೆ.ಎನ್. ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್. ರಾಜಣ್ಣ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಜಾತಿಯ ಮುಂದೆ ಕ್ರಿಶ್ಚಿಯನ್ ಎಂದು ಬರೆದಿರುವುದನ್ನು ನಾನು ವಿರೋಧಿಸಿದ್ದೇನೆ. ಅದನ್ನು ಈಗ ಡಿಲೀಟ್ ಮಾಡಿದ್ದಾರೆ. ಸರ್ಕಾರ ಈ ರೀತಿ ಬರೆದು ಸಮೀಕ್ಷೆ ಮಾಡುವುದರಿಂದ ಮತಾಂತರಕ್ಕೆ ಪ್ರೋತ್ಸಾಹಿಸಿದಂತೆ ಎಂದು ಹೇಳಿದ್ದಾರೆ.
ಬೇರೆ ಧರ್ಮಕ್ಕೆ ಮತಾಂತರಗೊಂಡವರು ಮೂಲಜಾತಿಯ ಮೀಸಲಾತಿ ಸೌಲಭ್ಯ ಪಡೆಯುತ್ತಾರೆ. ಇದಕ್ಕೂ ರಾಜ್ಯ ಸರ್ಕಾರ ಅವಕಾಶ ಕೊಡಬಾರದು ಎಂದು ರಾಜಣ್ಣ ಒತ್ತಾಯಿಸಿದ್ದಾರೆ.