ಬೆಂಗಳೂರು: ಕೆಲವು ದಿನಗಳ ಹಿಂದೆಯಷ್ಟೇ ಡ್ರಗ್ಸ್ ಪೆಡ್ಲರ್ ಗಳ ಜೊತೆಗೆ ನಂಟು ಹೊಂದಿದ್ದ ಆರೋಪದ ಮೇಲೆ 11 ಪೊಲೀಸರ ತಲೆದಂಡವಾಗಿತ್ತು. ಇದೀಗ ಡ್ರಗ್ಸ್ ದಂಧೆ, ಪಬ್ ಗೆ ನೆರವು ನೀಡಿದ ಆರೋಪದ ಮೇಲೆ ಇಬ್ಬರು ಇನ್ ಸ್ಪೆಕ್ಟರ್ ಗಳನ್ನು ಅಮಾನತು ಮಾಡಲಾಗಿದೆ.
ಡಿಸಿಪಿ ಆದೇಶದ ಮೇರೆಗೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಶಿಸ್ತು ಕ್ರಮ ಜರುಗಿಸಿದ್ದಾರೆ. ಹಲಸೂರು ಗೇಟ್ ಪೊಲೀಸ್ ಇನ್ ಸ್ಪೆಕ್ಟರ್ ಹನುಮಂತ ಭಜಂತ್ರಿ, ಕೋರಮಂಗಲ ಠಾಣೆಯ ಇನ್ ಸ್ಪೆಕ್ಟರ್ ಎಸ್.ಎಲ್.ಆರ್. ರೆಡ್ಡಿ ಅವರನ್ನು ಅಮಾನತು ಮಾಡಲಾಗಿದೆ.
ಕಾನೂನು ಸುವ್ಯವಸ್ಥೆಯ ಅಸಮರ್ಪಕ ನಿರ್ವಹಣೆ, ಅಪರಾಧ ಪ್ರಕರಣ ಪತ್ತೆದಾರಿಕೆಯಲ್ಲಿ ಲೋಪ ಎಸಗಿದ ಆರೋಪ ಹಲಸೂರು ಗೇಟ್ ಪಿಐ ಹನುಮಂತ ಭಜಂತ್ರಿ ಅವರ ಮೇಲಿದೆ. ತಮ್ಮ ಠಾಣೆಯ ಸರಹದ್ದಿನಲ್ಲಿ ಪಬ್ ಗಳು ಅವಧಿ ಮೀರಿ ವಹಿವಾಟು ನಡೆಸಿದ, ನಿಯಮ ಉಲ್ಲಂಘಿಸಿ ಧ್ವನಿವರ್ಧಕ ಬಳಕೆ ಮಾಡಿದರೂ ನಿಯಂತ್ರಿಸದೇ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಕೋರಮಂಗಲ ಠಾಣೆ ಪಿಐ ಎಸ್.ಎಲ್.ಆರ್. ರೆಡ್ಡಿ ಲೋಪವೆಸಗಿದ್ದರು.
ಈ ಹಿನ್ನೆಲೆಯಲ್ಲಿ ಕೇಂದ್ರ ವಿಭಾಗದ ಡಿಸಿಪಿ ಮತ್ತು ಆಗ್ನೇಯ ವಿಭಾಗದ ಡಿಸಿಪಿ ಪ್ರತ್ಯೇಕವಾಗಿ ವರದಿ ಸಲ್ಲಿಸಿದ್ದರು. ವರದಿ ಆಧರಿಸಿ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಇಬ್ಬರನ್ನು ಅಮಾನತುಗೊಳಿಸಿ ಇಲಾಖೆ ವಿಚಾರಣೆಗೆ ಆದೇಶಿಸಿದ್ದಾರೆ.