ಧಾರವಾಡ: ಯೂಟ್ಯೂಬರ್ ಖ್ವಾಜಾ ಅಲಿಯಾಸ್ ಮುಕಳೆಪ್ಪ ವಿವಾಹ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡಗೋಡ ಉಪ ನೋಂದಣಾಧಿಕಾರಿ ಕಚೇರಿಗೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಯುವತಿ ಗಾಯತ್ರಿ ತಾಯಿ ಶಿವಕ್ಕ ಮುತ್ತಿಗೆ ಹಾಕಿದ್ದಾರೆ.
ಯುವತಿಯ ತಾಯಿ ಶಿವಕ್ಕ ಅವರು ಸಬ್ ರಿಜಿಸ್ಟ್ರಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಣ ಪಡೆದು ನಿಯಮ ಬಾಹಿರವಾಗಿ ವಿವಾಹ ನೋಂದಣಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಹುಬ್ಬಳ್ಳಿ, ಧಾರವಾಡದವರನ್ನು ಮುಂಡಗೋಡದವರು ಎಂದು ಸುಳ್ಳು ದಾಖಲೆ ನೀಡಿ ವಿವಾಹ ನೋಂದಣಿ ಮಾಡಲಾಗಿದೆ. ಜೂನ್ 5ರಂದು ದಾಖಲೆ ನೀಡಿ ಜೂನ್ 5ರಂದೇ ವಿವಾಹ ನೋಂದಣಿ ಮಾಡಲಾಗಿದೆ ಎಂದು ದೂರಿದ್ದಾರೆ.
ನಿಯಮದಂತೆ ವಿವಾಹವಾಗುವವರು ಒಬ್ಬರಾದರೂ ಸ್ಥಳೀಯರಾಗಿರಬೇಕು ಎನ್ನುವ ನಿಯಮ ಪಾಲಿಸಲ್ಲ. ಕರಾರುಪತ್ರ ಪಡೆದಿರುವ ದಿನವೇ ವಿವಾಹ ನೋಂದಣಿ ಮಾಡಲಾಗಿದೆ ಎಂದು ಸಬ್ ರಿಜಿಸ್ಟ್ರಾರ್ ವಿರುದ್ಧ ಶಿವಕ್ಕ ಮುಂಡಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರಿಂದ ಪದೇ ಪದೇ ಕಿರಿಕಿರಿ: ಠಾಣೆಗೆ ಹಾಜರಾದ ಗಾಯತ್ರಿ
ಮುಕಳೆಪ್ಪಪ್ ಮದುವೆ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಗೆ ಯುವತಿ ಗಾಯತ್ರಿ ಹಾಜರಾಗಿದ್ದಾರೆ. ಠಾಣೆಯ ಬಳಿ ಹಿಂದೂ ಪರ ಸಂಘಟನೆಗಳು ಕಾರ್ಯಕರ್ತರು ಜಮಾಯಿಸಿದ್ದಾರೆ. ಯುವತಿ ಜೊತೆಗೆ ಮಾತನಾಡಲು ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ. ತಡೆಯಲು ಹೋದ ಪೊಲೀಸರ ಜೊತೆಗೂ ವಾಗ್ವಾದ ನಡೆಸಿದ್ದಾರೆ.
ನಾನು ಸ್ವಂತ ಇಚ್ಛೆಯಿಂದ ಮುಕಳೆಪ್ಪ ಅವರನ್ನು ಮದುವೆಯಾಗಿದ್ದೇನೆ. ನಾವಿಬ್ಬರೂ 2 ವರ್ಷದಿಂದ ಪ್ರೀತಿಸಿ ಮದುವೆಯಾಗಿದ್ದೇವೆ. ಮುಂಡಗೋಡಕ್ಕೆ ಚಿತ್ರೀಕರಣಕ್ಕೆ ಹೋಗುತ್ತಿದ್ದೆವು. ಅಲ್ಲೇ ಮದುವೆಯಾದೆವು. ನನಗೆ ಜೀವ ಬೆದರಿಕೆ ಇದೆ. ರಕ್ಷಣೆ ಬೇಕು ಎಂದು ಗಾಯತ್ರಿ ಹೇಳಿದ್ದಾರೆ.
ಹುಬ್ಬಳ್ಳಿಯ ವಿದ್ಯಾನಗರ ಠಾಣೆಯ ಬಳಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ತಂದೆ, ತಾಯಿ ಹೇಳಿರುವುದೆಲ್ಲ ಸುಳ್ಳು. ಅಪಹರಣ, ಜೀವ ಬೆದರಿಕೆ ಎಂದು ಸುಳ್ಳು ಸುದ್ದಿ ಹೇಳುತ್ತಿದ್ದಾರೆ. ಇದಕ್ಕೆ ಈಗಾಗಲೇ ನಾನು ಠಾಣೆಗೆ ಬಂದು ಸ್ಪಷ್ಟನೆ ನೀಡಿದ್ದೇನೆ. ಪೊಲೀಸರು ಪದೇ ಪದೇ ಕರೆದು ಕಿರಿಕಿರಿ ಮಾಡುತ್ತಿದ್ದಾರೆ. ನಾವು ಮದುವೆಯಾಗಿದ್ದೇವೆ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಈಗ ಎರಡು ದಿನದಿಂದ ನಮ್ಮ ಪೋಷಕರ ತಲೆಕೆಡಿಸಿದ್ದಾರೆ. ಕೆಲವೊಂದು ಆಡಿಯೋಗಳು ಎಡಿಟ್ ಮಾಡಿರಬಹುದು. ನಾನು ಈಗ ಗಂಡನ ಮನೆಗೆ ಹೋಗುತ್ತೇನೆ ಎಂದು ಗಾಯತ್ರಿ ಹೇಳಿದ್ದಾರೆ.
ವಿಚಾರಣೆ ಎದುರಿಸಿದ ಗಾಯತ್ರಿ ಠಾಣೆಯಿಂದ ಹುಬ್ಬಳ್ಳಿಯ ವಿದ್ಯಾನಗರ ಠಾಣೆಯಿಂದ ತೆರಳಿದ್ದಾರೆ. ಮೂರು ಗಂಟೆಗಳ ಕಾಲ ಗಾಯತ್ರಿ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಬಳಿಕ ಭದ್ರತೆಯೊಂದಿಗೆ ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಧಾರವಾಡ ಮಹಿಳಾ ಸಾಂತ್ವನ ಕೇಂದ್ರಕ್ಕೆ ಯುವತಿ ಗಾಯಿತ್ರಿಯನ್ನು ಕರೆದುಕೊಂಡು ಹೋಗಲಾಗಿದೆ.