ಬೆಂಗಳೂರು: ಹಾಡಹಗಲೇ ದುಷ್ಕರ್ಮಿಯೊಬ್ಬ ನಡುರಸ್ತೆಯಲ್ಲಿ ಮಹಿಳೆಗೆ ಚಾಕು ಇರಿದು ಹತ್ಯೆಗೈದಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆ ಬಳಿ ನಡೆದಿದೆ.
ರೇಖಾ ಮೃತ ಮಹಿಳೆ. ಲೋಕೇಶ್ ಚಾಕು ಇರಿದು ಪರಾರಿಯಾಗಿರುವ ಆರೋಪಿ. ಸುಂಕದಕಟ್ಟೆ ಬಳಿ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ಮಹಿಳೆ ರೇಖಾ ಜೊತೆ ಗಲಾಟೆ ಆರಂಭಿಸಿದ್ದ ಲೋಕೇಶ್ ಏಕಾಏಕಿ ಚಾಕು ಇರಿದಿದ್ದಾನೆ. ಬರೋಬ್ಬರಿ 11 ಬಾರಿ ಚಾಕು ಇರಿದಿದ್ದು, ರೇಖಾ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ರೇಖಾ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ ಚಿಕಿತ್ಸೆ ಫಲಿಸದೇ ರೇಖಾ ಕೊನೆಯುಸಿರೆಳೆದಿದ್ದಾರೆ. ಮೃತ ರೇಖಾ ತುಮಕೂರು ಜಿಲೆಯ ಶಿರಾ ಮೂಲದವರು. ನಾಲ್ಕು ತಿಂಗಳ ಹಿಂದಷ್ಟೇ ಸುಂಕದಕಟ್ಟೆ ಬಳಿ ವಾಸವಾಗಿದ್ದರು. ಪತ್ನಿ ರೇಖಾ ಮೇಲೆ ಅನುಮಾನಗೊಂಡು ಅವರ ಎರಡನೇ ಪತಿಯೇ ಅವರನ್ನು ಚಾಕು ಇರಿದು ಕೊಂದಿದ್ದಾನೆ ಎಂದು ಹೇಳಲಾಗುತ್ತಿದೆ. ಕೃತ್ಯದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.