ಬೆಂಗಳೂರು: ಬಿಜೆಪಿ ಸಂಸದ ಕೆ.ಸುಧಾಕರ್ ಅವರ ಪತ್ನಿಗೆ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಸೈಬರ್ ವಂಚಕರು ಲಕ್ಷ ಲಕ್ಷ ಹಣ ದೋಚಿರುವ ಘಟನೆ ನಡೆದಿದೆ.
ಸಂಸದ ಸುಧಾಕರ್ ಪತ್ನಿ ವೈದ್ಯೆ ಡಾ.ಪ್ರೀತಿ ಅವರಿಗೆ ಕರೆ ಮಾಡಿರುವ ವಂಚಕರು, ಡಿಜಿಸಿಟಲ್ ಅರೆಸ್ಟ್ ಆಗಿದ್ದೀರಿ ಎಂದು ಬೆದರಿಸಿ 14 ಲಕ್ಷ ರೂಪಾಯಿ ದೋಚಿದ್ದಾರೆ. ಮುಂಬೈ ಸೈಬರ್ ವಿಭಾಗದಿಂದ ಕರೆ ಮಾಡುತ್ತಿರುವುದಾಗಿ ಹೇಳಿರುವ ವಂಚಕರು, ನಿಮ್ಮ ಹೆಸರಲ್ಲಿರುವ ದಾಖಲೆಗಳನ್ನು ಸದ್ಧತ್ ಖಾನ್ ಎಂಬಾತ ಬಳಸಿಕೊಂಡು ನಿಮ್ಮ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್ ಮಾಡಿಸಿ ಅದರಿಂದ ಅಕ್ರಮ ವ್ಯವಹಾರ ನಡೆಸುತ್ತಿದ್ದಾನೆ. ವಿಯಟ್ನಾಂ, ಕಾಂಬೋಡಿಯಾ, ಲಾವೋಸ್ ದೇಶಗಳಿಗೆ ಕಾನೂನು ಬಾಹಿರ ಚಟುವಟಿಕೆ ನಡೆಸಲು ಜನರನ್ನು ಕಳುಹಿಸಿದ್ದಾನೆ. ಪ್ರಕರಣದಲ್ಲಿ ಸದ್ಧತ್ ಖಾನ್ ನನ್ನು ಅರೆಸ್ಟ್ ಮಾಡಲಾಗಿದೆ. ಆತ ನಿಮ್ಮ ಹೆಸರನ್ನು ಬಾಯ್ಬಿಟ್ಟಿದ್ದಾನೆ. ನಿಮ್ಮ ಹೆಸರಲ್ಲಿನ ದಾಖಲೆಗಳನ್ನು ಕೊಟ್ಟಿದ್ದಾನೆ. ಹಾಗಾಗಿ ವಿಚಾರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ನಿಮ್ಮ ದಾಖಲೆ, ವೈಯಕ್ತಿಕ ದಾಖಲೆಗಳನ್ನು ರದ್ದು ಮಾಡುವುದಾಗಿ ಬೆದರಿಕೆಯೊಡ್ದಿದ್ದಾರೆ. ನಿಮ್ಮ ಖಾತೆ ಅಕ್ರಮವಾಗಿದ್ದು, ಪರಿಶೀಲನೆ ನಡೆಸಬೇಕು ಹಣ ಹಾಕುವಂತೆ ಹೇಳಿ 14 ಲಕ್ಷ ಹಣ ವರ್ಗಾಯಿಸಿಕೊಂಡಿದ್ದಾರೆ. ಹಣ ಕಳುಹಿಸಿದ ಬಳಿಕ ಆರ್ ಬಿಐ ನಿಯಮದ ಪ್ರಕಾರ ಪರಿಶೀಲಿಸಿ 45 ನಿಮಿಷದಲ್ಲಿ ಹಣ ವಾಪಸ್ ಕಳುಹಿಸುವುದಾಗಿ ಹೇಳಿದ್ದಾರೆ. ವಂಚಕರು ಕೇಳಿದ ಖಾತೆಗೆ ಪ್ರೀತಿಯವರು ಹಣ ವರ್ಗಾಯಿಸಿದ್ದಾರೆ. ಕೆಲ ಸಮಯದಲ್ಲಿ ತನಗೆ ವಂಚನೆ ಆಗಿದೆ ಎಂಬುದು ಗೊತ್ತಾಗಿದೆ. ತಕ್ಷಣ ವೆಸ್ಟ್ ಸೆನ್ ಠಾಣೆಗೆ ದೂರು ನೀಡಿದ್ದಾರೆ. ಪಶ್ಚಿಮ ವಿಭಾಗದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರೀತಿ ಸುಧಾಕರ್ ಹಾಕಿರುವ ಖಾತೆಯ ಅಕೌಂಟ್ ಫ್ರೀಜ್ ಮಾಡಲಾಗಿದೆ. ಖಾತೆಯಿಂದ 14 ಲಕ್ಷ ಹಣವನ್ನು ಪ್ರೀತಿಯವರಿಗೆ ಮರಳಿಸಲಾಗಿದೆ. ಸದ್ಯ ಸೈಬರ್ ವಂಚಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.