ಬೆಂಗಳೂರು: ವಿವಾದ, ಗೊಂದಲಗಳ ನಡುವೆ ರಾಜ್ಯಾದ್ಯಂತ ಸೋಮವಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾತಿಗಣತಿ ಆರಂಭವಾಗಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಆಡಳಿತಾತ್ಮಕ ವಿಚಾರ, ಸಿಬ್ಬಂದಿ ಕೊರತೆ ಮತ್ತು ಸಿದ್ಧತೆ ವಿಳಂಬ ಹಿನ್ನೆಲೆಯಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಸೋಮವಾರದಿಂದ ಸಮೀಕ್ಷೆ ಆರಂಭವಾಗುವುದಿಲ್ಲ.
ರಾಜ್ಯದ 7 ಕೋಟಿ ಜನರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ತಿಳಿಯಲು ಸಮೀಕ್ಷೆ ಕೈಗೊಳ್ಳಲಾಗಿದೆ. 60 ಕಾಲಂಗಳಲ್ಲಿ ಪ್ರಶ್ನೆಗಳನ್ನು ಕೇಳಲಿದ್ದು, ಎಲ್ಲದಕ್ಕೂ ಕರಾರುವಕ್ಕಾದ ಮಾಹಿತಿ ಪಡೆಯಲು ಗಣತಿದಾರರಿಗೆ ಸೂಚಿಸಲಾಗಿದೆ.
ರಾಜ್ಯದಲ್ಲಿರುವ ಒಟ್ಟು 1561 ಜಾತಿಗಳ ಪಟ್ಟಿಯನ್ನು ಆಯೋಗ ಪ್ರಕಟಿಸಿದೆ. ಇವುಗಳಲ್ಲಿ ಕ್ರಿಶ್ಚಿಯನ್ ಹೆಸರಿನೊಂದಿಗೆ ಇರುವ 33 ಹಿಂದೂ ಜಾತಿಗಳ ಪಟ್ಟಿಯನ್ನು ನಮೂನೆಯಿಂದ ಕೈ ಬಿಡಲಾಗಿದೆ. ಜಾತಿಗಳಲ್ಲಿ ಮಾಹಿತಿದಾರರ ಜಾತಿ ಇಲ್ಲದಿದ್ದಲ್ಲಿ ಇದ್ದರೆ ಕಾಲಂನಲ್ಲಿ ತಮ್ಮ ಜಾತಿಯ ಹೆಸರು ನಮೂದಿಸಬಹುದು. ಜಾತಿ ಹೆಸರು ತಿಳಿಸಲು ಇಚ್ಛೆ ಇಲ್ಲದಿದ್ದರೆ ಇದು ಅನ್ವಯವಾಗುವುದಿಲ್ಲ. ಜಾತಿಯ ಹೆಸರು ಹೇಳಲು ನಿರಾಕರಿಸಿದ ಅಥವಾ ಜಾತಿಯ ಹೆಸರು ಗೊತ್ತಿಲ್ಲ ಎನ್ನುವ ಆಯ್ಕೆಯನ್ನು ಕೂಡ ಆಯ್ದುಕೊಳ್ಳಬಹುದಾಗಿದೆ.
ಈ ದಾಖಲೆ ಸಿದ್ಧವಾಗಿಟ್ಟುಕೊಳ್ಳಿ
ಪ್ರತಿ ವ್ಯಕ್ತಿಯ ಆಧಾರ್ ಕಾರ್ಡ್
ಆಧಾರ್ ಲಿಂಕ್ ಆಗಿರುವ ಮೊಬೈಲ್
ಪಡಿತರ ಚೀಟಿ
ಮತ ಗುರುತಿನ ಚೀಟಿ
ಅಂಗವಿಕಲರ ಯುಡಿಐಡಿ ಕಾರ್ಡ್ ಸಂಖ್ಯೆ
ಏನೇನು ಮಾಹಿತಿ ಸಂಗ್ರಹ
ವಯಸ್ಸು, ವಿದ್ಯಾರ್ಹತೆ, ಧರ್ಮ, ಜಾತಿ, ಉಪಜಾತಿ, ವೈವಾಹಿಕ ಸ್ಥಿತಿಗತಿ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯತೆ, ಚರ ಆಸ್ತಿ, ಸ್ಥಿರಾಸ್ತಿ ವಿವರ, ಮೂಲ ಸೌಕರ್ಯ, ಆರೋಗ್ಯ ಸೇವೆ, ಅಪೌಷ್ಟಿಕತೆ, ನ್ಯಾಯಾಲಯದಲ್ಲಿ ಪ್ರಕರಣ, ಸಾಲ, ಯಾವ ಸಾಲ, ಸರ್ಕಾರದಿಂದ ಸಬ್ಸಿಡಿ, ಸ್ವಂತ ಮನೆ, ಅಡುಗೆಗೆ ಬಳಸುವ ಇಂಧನ, ಶೌಚಾಲಯ ಇದೆಯೇ ಎಂಬುದು ಸೇರಿ ಹಲವು ಪ್ರಶ್ನೆಗಳನ್ನು ಗಣತಿದಾರರು ಕೇಳಲಿದ್ದಾರೆ.