ನವದೆಹಲಿ: ದೇಶದ ಜನತೆಗೆ ನವರಾತ್ರಿ ಹಬ್ಬದ ಶುಭಾಶಯಗಳನ್ನು ಕೋರಿರುವ ಪ್ರಧಾನಿ ನರೇಂದ್ರ ಮೋದಿ, ಜನತೆಗೆ ಗುಡ್ ನ್ಯೂಸ್ ನೀಡಿದ್ದಾರೆ. ನಾಳೆ ನವರಾತ್ರಿ ಹಬ್ಬದ ಮೊದಲ ದಿನ. ನಾಳೆ ಸೂರ್ಯೋದಯದಿಂದಲೇ ಜಿಎಸ್ ಟಿ ಕಡಿತವಾಗಲಿದೆ. ಎಲ್ಲಾ ವರ್ಗದ ಜನತೆಗೂ ಉಳಿತಾಯ ಉತ್ಸವ ಆರಂಭವಾಗಲಿದೆ ಎಂದು ಘೋಷಿಸಿದರು.
ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಾಳೆ ಸೂರ್ಯೋದಯದಿಂದಲೇ ಜಿಎಸ್ ಟಿ 2.0 ಜಾರಿಯಾಗಲಿದೆ. ಜಿಎಸ್ ಟಿ ಕಡಿತದಿಂದ ನಿಮ್ಮ ಉಳಿತಾಯ ಆರಂಭವಾಗಲಿದೆ. ದೇಶದ ಬಡ, ಮಧ್ಯಮ, ನವ ಮಧ್ಯಮ, ಯುವ ಜನತೆ, ರೈತರು, ಮಹಿಳೆಯರು ಹೀಗೆ ಎಲ್ಲಾ ವರ್ಗದವರಿಗೂ ಇದರಿಂದ ಅನುಕೂಲವಾಗಲಿದೆ. ಜಿಎಸ್ ಟಿ ಸುಧಾರಣೆಯಿಂದಾಗಿ ದೇಶದ ಅಭಿವೃದ್ಧಿಗೆ ಮತ್ತಷ್ಟು ಶಕ್ತಿಬರಲಿದೆ ಎಂದರು.
ಜಿಎಸ್ ಟಿ ಇಳಿಕೆ ಭಾರತದ ಅಭಿವೃದ್ಧಿಗೆ ವೇಗ ನೀಡಲಿದೆ. ದಶಕಗಳಿಂದ ಜನರು ಬೇರೆ ಬೇರೆ ತೆರಿಗೆಗಳಿಂದ ಬಳಲುತ್ತಿದ್ದರು. ಇದೀಗ ಜಿಎಸ್ ಟಿ ಇಳಿಕೆಯಾಗಿದ್ದು, ದೇಶದ ಅಭಿವೃದ್ಧಿಗೆ ಇದೊಂದು ಐತಿಹಾಸಿಕ ಹೆಜ್ಜೆಯಾಗಲಿದೆ ಎಂದು ಹೇಳಿದರು.