ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಾಡ ಹಬ್ಬ ದಸರಾ ವೇಳೆ ಕೊಡಲಾಗುವ ಪ್ರತಿಷ್ಠಿತ ‘ಸಂಗೀತ ವಿದ್ವಾನ್’ ಪ್ರಶಸ್ತಿಗೆ ಜನಪ್ರಿಯ ಸಂಗೀತಗಾರ ಪಂಡಿತ್ ಕೆ.ವೆಂಕಟೇಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾಹಿತಿ ನೀಡಿದ್ದಾರೆ. ದೇಶ ವಿದೇಶಗಳಲ್ಲಿ ತಮ್ಮ ಅದ್ಭುತ ಕಂಠಸಿರಿ, ಗಾಯನದ ಮೂಲಕ ಖ್ಯಾತಿ ಪಡೆದಿರುವ ಹಿಂದೂಸ್ತಾನಿ ಸಂಗೀತ ದಿಗ್ಗಜರಲ್ಲಿ ಒಬ್ಬರಾಗಿರುವ ಪಂ.ವೆಂಕಟೇಶ್ ಕುಮಾರ್ ಅವರಿಗೆ ಈ ಬಾರಿ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಸೆಪ್ಟೆಂಬರ್ 22ರಂದು ಮೈಸೂರಿನ ಅರಮನೆ ಮುಂಭಾಗದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಡಾ. ವೈ.ಕೆ.ಮುದ್ದುಕೃಷ್ಣ ಅವರಆಯ್ಕೆ ಸಲಹಾ ಸಮಿತಿ ಪಂ.ವೆಂಕಟೇಶ್ ಕುಮಾರ್ ಅವರನ್ನು ಆಯ್ಕೆ ಮಾಡಿದೆ ಎಂದು ತಿಳಿಸಿದರು.
ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.