ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಇಂದು ಬೆಂಗಳೂರು ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಮಳೆಯಿಂದಾಗಿ ಹಾನಿಯುಂಟಾದ ಸ್ಥಳಗಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್‍ನಲ್ಲಿ ಜಲಾವೃತವಾಗುವುದದನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿ, ಬಳಿಕ ಹೆಚ್.ಎಸ್.ಆರ್ 6ನೇ ಸೆಕ್ಟರ್(ಮಂಗಮ್ಮನ ಪಾಳ್ಯ ಮುಖ್ಯ ರಸ್ತೆ ಬಳಿ) ಮೆಟ್ರೋ ಕಾಮಗಾರಿಯ ಮೀಡಿಯನ್ ಸರಿಯಾಗಿ ಅಳವಡಿಸದೇ ಇರುವುದು, ಅನುಪಯುಕ್ತ ಮೆಟಿರಿಯಲ್ ಅನ್ನು ಕೂಡಲೆ ತೆರವುಗೊಳಿಸಬೇಕು. ಜೊತೆಗೆ ರಸ್ತೆ ಬದಿ ಸ್ವಚ್ಛತೆ ಹಾಗೂ ಡಾಂಬರೀಕರಣ ಹಾಕಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಮೆಟ್ರೋ ಅಧಿಕಾರಿಗಳಿಗೆ ಸೂಚಿಸಿದರು.
ಅಗರ ಕೆರೆ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದ್ದು, ರಸ್ತೆಯನ್ನು ಸಂಪೂರ್ಣ ಸುಸ್ಥಿತಿಯಲ್ಲಿಡಬೇಕು. ಕೂಡಲೇ ಡ್ರೈನೇಜ್ ಕೆಲಸ ಮುಗಿಸಬೇಕು. ಹಾಳಾಗಿರುವ ಕಡೆ ರಸ್ತೆ ಲೆವೆಲ್ ಮಾಡಿ ರೋಲ್ ಮಾಡಿ, ವೆಟ್ ಮಿಕ್ಸ್ ಹಾಕಿ ಮೋಟರೆಬಲ್ ಮಾಡಲು ತಿಳಿಸಿದರು.
ಅಗರ ಜಂಕ್ಷನ್ ಬಳಿ ಮೇಲ್ಸೇತುವೆಯ ಮೇಲೆ ಬೀಳುವ ನೀರಿಗೆ ಅಳವಡಿಸಿರುವ ಪೈಪ್ ಹಾಳಾಗಿದ್ದು, ರಸ್ತೆ ಮೇಲೆ ನೀರು ಬೀಳುತ್ತಿದೆ. ಈ ಸಂಬಂಧ ರಸ್ತೆ ಮೇಲೆ ನೀರು ಬೀಳದಂತೆ ಪೈಪ್ ಗಳನ್ನು ಅಳವಡಿಸಬೇಕು. ಮುಖ್ಯ ರಸ್ತೆಯನ್ನು ಮೆಟ್ರೋ, ಸರ್ವೀಸ್ ರಸ್ತೆಯನ್ನು ಪಾಲಿಕೆ ದುರಸ್ತಿ ಮಾಡಬೇಕಿದ್ದು, ಈ ಕ್ಷಣವೇ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲು ಮೆಟ್ರೋ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸರ್ಜಾಪುರ ಸರ್ವೀಸ್ ರಸ್ತೆಯನ್ನು ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಲು ದಕ್ಷಿಣ ಪಾಲಕೆ ಆಯುಕ್ತರಿಗೆ ಸೂಚಿಸಿದ ಮುಖ್ಯ ಕಾರ್ಯದರ್ಶಿಗಳು, ಇಬ್ಲೂರು ಜಂಕ್ಷನ್ ಬಳಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಸ್ಕೈವಾಕ್ ನಿರ್ಮಾಣ ಮಾಡುವಂತೆ ತಿಳಿಸಿದರು.
ಪಣತ್ತೂರು ರಸ್ತೆ ಸಂಪೂರ್ಣ ಹಾಳಾಗಿದ್ದು, ಕೂಡಲೇ ದುರಸ್ತಿ ಕಾರ್ಯ ನಡೆಸಲು ತಿಳಿಸಿದರು. ಪಾದಚಾರಿ ಮಾರ್ಗ ಸ್ಲ್ಯಾಬ್ ಹಾಳಾಗಿದ್ದು, ಅದನ್ನು ಬದಲಿಸಿ, ಡ್ರೈನ್‍ನಲ್ಲಿ ಹೂಳೆತ್ತಿ ನೀರು ಸರಾಗವಾಗಿ ಹೋಗುವಂತೆ ಮಾಡಲು ತಿಳಿಸಿದರು.
ವಿಬ್‍ಗಯಾರ್ ಸ್ಕೂಲ್ ರಸ್ತೆ ತೂಬರಹಳ್ಳಿ ಬಳಿ ರಸ್ತೆ ಹಾಗೂ ಡ್ರೈನ್ ಕಾಮಗಾರಿಗೆ ವೇಗ ನೀಡಿ ಪೂರ್ಣಗೊಳಿಸಬೇಕು. ಕೆಲಸ ಮುಗಿದ ಬಳಿಕ ಯಾವುದೇ ಡೆಬ್ರಿಸ್ ಇರಬಾರದು. ವಿಪತ್ತು ನಿರ್ವಹಣೆ ಕಾಯ್ದೆ ಅಡಿ ನೀರುಗಾಲುವೆ ಮಾಡಲು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.