ಬೆಂಗಳೂರು: ಬಿಡಿಎ ವಸತಿ ಯೋಜನೆ ಅನುಷ್ಠಾನದಲ್ಲಿ 5 ಕೋಟಿ ರೂ.ಗೂ ಅಧಿಕ ಮತದ ಕಿಕ್ ಬ್ಯಾಕ್ ಪಡೆದಿದ್ದಾರೆ ಎನ್ನುವ ಆರೋಪ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಶಾಸಕರಾದ ಬಿ.ವೈ. ವಿಜಯೇಂದ್ರ ಮತ್ತು ಎಸ್.ಟಿ. ಸೋಮಶೇಖರ್ ಹಾಗೂ ಇತರರಿಗೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿದೆ.
2022 ರಲ್ಲಿ ಯಡಿಯೂರಪ್ಪ ಮತ್ತು ಇತರರ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಲೋಕಾಯುಕ್ತ ಪೊಲೀಸರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ನ್ಯಾಯಾಲಯ ಇನ್ನೂ ಬಿ ರಿಪೋರ್ಟ್ ಅಂಗೀಕರಿಸಿಲ್ಲ.
ಈ ಪ್ರಕರಣದಲ್ಲಿ ಆರೋಪಿತರ ವಿರುದ್ಧ ದೂರುದಾರರು ಮಾಡಿದ್ದ ಕಿಕ್ ಬ್ಯಾಕ್ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಬಲ ಸಾಕ್ಷ್ಯಾಧಾರಗಳು ಸಲ್ಲಿಕೆಯಾಗಿಲ್ಲ. ಈ ನಿಟ್ಟಿನಲ್ಲಿ ಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ.
ಬಿದರಹಳ್ಳಿ ಹೋಬಳಿ ಕೋನದಾಸಪುರ ಸೇರಿ ವಿವಿಧ ಪ್ರದೇಶಗಳಲ್ಲಿ ಬಿಡಿಎ ವಸತಿ ಯೋಜನೆಯ ಗುತ್ತಿಗೆ ನೀಡಿಕೆಯಲ್ಲಿ ಅಂದಿನ ಸಿಎಂ ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಬಿಡಿಎ ಅಂದಿನ ಅಧ್ಯಕ್ಷ ಎಸ್.ಟಿ. ಸೋಮಶೇಖರ್ ಇತರರು ಬಿಡಿಎ ಗುತ್ತಿಗೆದಾರರಿಂದ 5 ಕೋಟಿ ರೂಪಾಯಿಗೂ ಅಧಿಕ ಕಿಕ್ ಬ್ಯಾಂಕ್ ಪಡೆದಿರುವುದಾಗಿ ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಕೋರ್ಟಿಗೆ ಖಾಸಗಿ ದೂರು ಸಲ್ಲಿಸಿದ್ದರು.
ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯನ್ವಯ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿತ್ತು. ಯಡಿಯೂರಪ್ಪ, ವಿಜಯೇಂದ್ರ, ಎಸ್.ಟಿ. ಸೋಮಶೇಖರ್, ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ ಮರಡಿ, ಅಳಿಯ ಸಂಜಯ್ ಶ್ರೀ, ಐಎಎಸ್ ಅಧಿಕಾರಿ ಜಿ.ಸಿ. ಪ್ರಕಾಶ್, ಗುತ್ತಿಗೆದಾರ ಚಂದ್ರಕಾಂತ ರಾಮಲಿಂಗಂ ಸೇರಿ 9 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗಿತ್ತು.