ಬೆಂಗಳೂರು: ಇಂದು ಬಿಡುಗಡೆಯಾಗಿರುವ ‘ಜಾಲಿ ಎಲ್.ಎಲ್.ಬಿ. 3’ ಚಿತ್ರದ ಬಿಡುಗಡೆ ಮತ್ತು ಪ್ರದರ್ಶನಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಅರ್ಜಿದಾರನಿಗೆ 50,000 ರೂ. ದಂಡ ವಿಧಿಸಲಾಗಿದೆ.
ಬೆಂಗಳೂರಿನ ಮಂಜುನಾಥ ನಗರದ ನಿವಾಸಿ ಸೈಯದ್ ನೀಲಫರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗಿಯ ಪೀಠದಿಂದ ಈ ಆದೇಶ ನೀಡಲಾಗಿದೆ.
‘ಜಾಲಿ ಎಲ್.ಎಲ್.ಬಿ. 3’ ಚಿತ್ರದಲ್ಲಿರುವ ಸಂಭಾಷಣೆ ಮತ್ತು ದೃಶ್ಯಗಳು ಭಾರತೀಯ ನ್ಯಾಯ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಉಲ್ಲಂಘನೆ ಮಾಡಿದಂತಿದೆ. ಹೀಗಾಗಿ ಚಿತ್ರದ ನಟರು, ನಿರ್ಮಾಪಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಿಸಿದ ಪ್ರಾಧಿಕಾರಕ್ಕೆ ಸೂಚಿಸಬೇಕು. ಚಿತ್ರದ ನಿರ್ಮಾಪಕರ ಮತ್ತು ನಟರು ರಾಷ್ಟ್ರೀಯ ಪತ್ರಿಕೆಗಳಲ್ಲಿ ಕ್ಷಮೆಯಾಚಿಸಲು ನಿರ್ದೇಶಿಸಬೇಕೆಂದು ಅರ್ಜಿದಾರರು ಮನವಿ ಮಾಡಿದ್ದರು.
ಈ ಮನವಿ ಪುರಸ್ಕರಿಸಲು ವಿಭಾಗೀಯ ಪೀಠ ನಿರಾಕರಿಸಿದೆ. ಚಿತ್ರದಲ್ಲಿರುವ ನ್ಯಾಯಾಲಯದ ದೃಶ್ಯಗಳು ಹಾಸ್ಯ ಪ್ರಜ್ಞೆ ಮೂಲಕ ಪ್ರೇಕ್ಷಕರನ್ನು ಆಕರ್ಷಿಸುವ ಉದ್ದೇಶದಿಂದ ಕೂಡಿದೆ ಎಂದು ತೋರುತ್ತದೆ. ಈ ಹಾಸ್ಯ ಪ್ರಜ್ಞೆ ಅರ್ಜಿದಾರರನ್ನು ಆಕರ್ಷಿಸಿಲ್ಲ. ಹೀಗಾಗಿ ಸೃಜನಶೀಲತೆಯನ್ನು ಹತ್ತಿಕ್ಕುವುದು ಮತ್ತು ದೃಶ್ಯಗಳನ್ನು ಸೆನ್ಸಾರ್ ಮಾಡುವಂತೆ ಆದೇಶಿಸಲಾಗದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.