ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಈ ನಡುವೆ ಸೌಜನ್ಯ ಮಾನ ವಿಠಲಗೌಡ ತೋರಿಸಿದ್ದ ಬಂಗ್ಲಗುಡ್ಡ ಜಾಗದಲ್ಲಿ ಶೋಧಕಾರ್ಯಾಚರಣೆ ನಡೆಸಲಾಗುತ್ತಿದೆ.
ಬಂಗ್ಲಗುಡ್ಡದ 5 ಸ್ಥಳಗಳಲ್ಲಿ 5 ಬುರುಡೆ, ಅಸ್ಥಿಪಂಜರ, ಐಡಿ ಕಾರ್ಡ್, ಎರಡು ಹಗ್ಗ, ಸೀರೆ ಹೀಗೆ ಹಲವು ವಸ್ತುಗಳು ಪತ್ತೆಯಾಗಿದ್ದು, ಇಂದೂ ಕೂಡ ಮಹಜರು ಕಾರ್ಯ ಮುಂದುವರೆದಿದೆ. ಬಂಗ್ಲಗುಡ್ಡದ ಮರದ ಬಳಿ ನಡೆದ ಶೋಧಕಾರ್ಯಾಚರಣೆ ವೇಳೆ ಎಸ್ ಐಟಿ ಅಧಿಕಾರಿಗಳಿಗೆ ಸಿಕ್ಕ ಬುರುಡೆ, ಅಸ್ಥಿಪಂಜರದ ಬಳಿ ಐಡಿ ಕಾರ್ಡ್ ಪತ್ತೆಯಾಗಿದ್ದು, ಇದು ಯು.ಬಿ.ಅಯ್ಯಪ್ಪ ಎಂಬುವವರದ್ದು ಎಂದು ತಿಳಿದುಬಂದಿದೆ.
ಯು.ಬಿ.ಅಯ್ಯಪ್ಪ ಎಂಬುವವರ ಐಡಿ ಕಾರ್ಡ್ ಇದಾಗಿದ್ದು, ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ನಿವಾಸಿ. 7 ವರ್ಷಗಳ ಹಿಂದೆ ವೃದ್ಧ ಯು.ಬಿ ಅಯ್ಯಪ್ಪ ನಾಪತ್ತೆಯಾಗಿದ್ದರು. ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದಾಗ ಅಯ್ಯಪ್ಪ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಕುಟ್ಟ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಯು.ಬಿ.ಅಯ್ಯಪ್ಪ ಅವರಿಗಾಗಿ ಕುಟುಂಬ ಸಾಕಷ್ಟು ಹುಡುಕಾಟ ನಡೆಸಿತ್ತು. ಆದಾಗ್ಯೂ ಅವರ ಸುಳಿವು ಇರಲಿಲ್ಲ, ಎಷ್ಟೇ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಇಂದು ಧರ್ಮಸ್ಥಳದ ಬಂಗ್ಲಗುಡ್ಡದಲ್ಲಿ ಎಸ್ ಐಟಿ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ಅಸ್ಥಿಪಂಜರವೊಂದರ ಬಳಿ ಯು.ಬಿ.ಅಯ್ಯಪ್ಪ ಅವರ ಐಡಿ ಕಾರ್ಡ್ ಪತ್ತೆಯಾಗಿದೆ.