ಬೆಂಗಳೂರು: ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಸರ್ಕಾರ ಬಡ್ತಿ ನೀಡದೇ ಕಿರಿಯ ಅಧಿಕಾರಿಗಳಾಗಿದ್ದ ಉಮೇಶ್ ಕುಮಾರ್ ಹಾಗೂ ಅರುಣ್ ಚಕ್ರವರ್ತಿ ಅವರನ್ನು ಡಿಜಿಪಿಯಾಗಿ ಬಡ್ತಿ ನೀಡಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ತಡೆ ನೀಡಿದೆ.
ಡಿಜಿಪಿ ಹುದ್ದೆಯ ಆಕಾಂಕ್ಷಿಯಾಗಿದ್ದ ಅಲೋಕ್ ಕುಮಾರ್, ತನಗೆ ಸೇವಾ ಹಿರಿತನವಿದ್ದರೂ ಸರ್ಕಾರ ತನ್ನನ್ನು ಪರಿಗಣಿಸದೇ ತನಗಿಂತ ಕಿರಿಯರಾದ ಉಮೇಶ್ ಕುಮಾರ್ ಹಾಗೂ ಅರುಣ್ ಚಕ್ರವರ್ತಿ ಅವರಿಗೆ ನೀಡಿದ್ದ ಬಡ್ತಿಯನ್ನು ಪ್ರಶ್ನಿಸಿ ಸಿಎಟಿ ಮೊರೆ ಹೋಗಿದ್ದರು. ಅಲೋಕ್ ಕುಮಾರ್ ಅವರ ವಿರುದ್ಧ ಇಲಾಖಾ ವಿಚಾರಣೆ ಬಾಕಿಯಿರುವ ಹಿನ್ನೆಲೆಯಲ್ಲಿ ಇದನ್ನು ಮುಂದಿಟ್ಟು ರಾಜ್ಯ ಸರ್ಕಾರ ಅವರಿಗೆ ಮುಂಬಡ್ತಿ ನೀಡಿರಲಿಲ್ಲ ಎನ್ನಲಾಗಿದೆ. ಅಲೋಕ್ ಕುಮಾರ್ ಉಪೇಕ್ಷಿಸಿ ಡಿಜಿಪಿಯಾಗಿ ಉಮೇಶ್ ಕುಮಾರ್ ಹಾಗೂ ಅರುಣ್ ಚಕ್ರವರ್ತಿಯವರಿಗೆ ಸರ್ಕಾರ ಬಡ್ತಿ ನೀಡಿತ್ತು.
ಇದನ್ನು ಅಲೋಕ್ ಕುಮಾರ್ ಸಿಎಟಿಯಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಸಿಎಟಿಯ ಇಬ್ಬರು ನ್ಯಾಯಮೂರ್ತಿಗಳು ಅಲೋಕ್ ಕುಮಾರ್ ಅರ್ಜಿ ಬಗ್ಗೆ ಭಿನ್ನ ರೀತಿಯ ತೀರ್ಪು ನೀಡಿದ್ದಾರೆ. ಸಿಎಟಿಯ ಮೂರನೇ ನ್ಯಾಯಮೂರ್ತಿ ಇಲಾಖೆ ವಿಚಾರಣೆ ಬಗ್ಗೆ ತೀರ್ಮಾನಿಸಬೇಕಿದೆ.
ಈ ನಡುವೆ ಸಿಎಟಿ ಡಿಜಿಪಿಯಾಗಿ ನೇಮಕಗೊಂಡಿದ್ದ ಉಮೇಶ್ ಕುಮಾರ್ ಹಾಗೂ ಅರುಣ್ ಚಕ್ರವರ್ತಿ ಅವರ ಬಡ್ತಿಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.