ನವದೆಹಲಿ: ದೇಶಾದ್ಯಂತ ಸೆಪ್ಟೆಂಬರ್ 22 ರಿಂದ ಜಾರಿಯಾಗಲಿರುವ ಪರಿಷ್ಕೃತ ಜಿಎಸ್‌ಟಿ ದರಗಳ ಲಾಭ ಸಂಪೂರ್ಣವಾಗಿ ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತಷ್ಟು ಕ್ರಮ ಕೈಗೊಂಡಿದೆ.
ಜಿಎಸ್‌ಟಿ ಇಳಿಕೆಯಿಂದ ದರ ಕಡಿತ ಆಗಿರುವುದನ್ನು ಗ್ರಾಹಕರಿಗೆ ಮನವರಿಕೆ ಮಾಡಿಕೊಡಲು ಚಿಲ್ಲರೆ ಮಳಿಗೆಗಳು ಹೆಚ್ಚಿನ ಗಮನಹರಿಸಬೇಕು ಎಂದು ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವಾಲಯ ಸೂಚನೆ ನೀಡಿದೆ.
ಜಿಎಸ್‌ಟಿ ಪರಿಷ್ಕರಣೆಯಿಂದ ಆಗಿರುವ ದರ ಕಡಿತದ ವಿವರಗಳನ್ನು ಎಲ್ಲಾ ಚಿಲ್ಲರ ಮಳಿಗೆಗಳ ಮುಂದೆ ಕಡ್ಡಾಯವಾಗಿ ಪ್ರದರ್ಶಿಸಬೇಕು. ಬಿಲ್ ಗಳಲ್ಲಿ ಜಿಎಸ್‌ಟಿ ಕಡಿತವಾಗಿರುವ ಬಗ್ಗೆ ಉಲ್ಲೇಖವಿರಬೇಕು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಸಚಿವಾಲಯ ಸೂಚನೆ ನೀಡಿದೆ.
ಅಲ್ಲದೇ, ಮುದ್ರಣ, ಟಿವಿ, ಆನ್ಲೈನ್ ಜಾಹೀರಾತುಗಳ ಮೂಲಕ ಗ್ರಾಹಕರಿಗೆ ಮನವರಿಕೆ ಮಾಡಿಕೊಡಬೇಕು. ಜಿಎಸ್‌ಟಿ ಪರಿಷ್ಕರಣೆಯಿಂದ ಆಗಿರುವ ಇಳಿಕೆ ಎಂದು ಸ್ಪಷ್ಟವಾಗಿ ನಮೂದಿಸಬೇಕು. ಸರಣಿ ಹಬ್ಬಗಳ ಋತುವಿನಲ್ಲಿ ವಿವಿಧ ಮಾಧ್ಯಮಗಳ ಮೂಲಕ ದರ ಕಡಿತದ ಮಾಹಿತಿಯನ್ನು ಗ್ರಾಹಕರಿಗೆ ನೀಡಬೇಕು. ಸೋಪು, ಕಾರು, ಟ್ರ್ಯಾಕ್ಟರ್, ಎಸಿ ಸೇರಿ 400 ಉತ್ಪನ್ನಗಳ ಬೆಲೆ ಕಡಿತವಾಗಲಿದೆ. ನಿತ್ಯ ಬಳಕೆ ಮಾಡುವ ಆಹಾರ, ಗೃಹೋಪಯೋಗಿ ಉತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಗೆ ಬರುತ್ತವೆ. ಬ್ರೆಡ್, ಹಾಲು, ಪನ್ನೀರ್ ನಂತಹ ಉತ್ಪನ್ನಗಳಿಗೆ ಯಾವುದೇ ತೆರಿಗೆ ಇರುವುದಿಲ್ಲ. ಸೆಪ್ಟೆಂಬರ್ 22 ರಿಂದ ಪರಿಷ್ಕೃತ ದರ ಜಾರಿಗೆ ಬರಲಿವೆ.