ರಾಯಚೂರು: ರಾಯಚೂರಿನಲ್ಲಿ ನಕಲಿ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು 120 ನಕಲಿ ಕ್ಲಿನಿಕ್ ಗಳನ್ನು ಸೀಜ್ ಮಾಡಿದ್ದಾರೆ.
ರಾಯಚೂರು ನಗರದಾದ್ಯಂತ ನಕಲಿ ವೈದ್ಯರು, ನಕಲಿ ಕ್ಲಿನಿಕ್ ಗಳು ತಲೆ ಎತ್ತಿರುವ ಬಗ್ಗೆ ಎಂಎಲ್ ಸಿ ಶರಣಗೌಡ ಬಯ್ಯಾಪುರ ದ್ವನಿ ಎತ್ತಿದ್ದರು. ಚಿಕಿತ್ಸೆ ಆರಂಭದಲ್ಲಿಯೇ ಆರ್ ಎಂಪಿ ನಕಲಿ ವೈದ್ಯರು ರೋಗಿಗಳಿಗೆ ಹೈ ಡೋಸೆಜ್ ಔಷಧಿ ಕೊಡುತ್ತಾರೆ. ಹೀಗಾಗಿ ನಕಲಿ ವೈದ್ಯರ ಬಳಿ ಬರುವ ರೋಗಿಗಳು ಶೀಘ್ರವಾಗಿ ಗುಣಮುಖರಾಗುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಆದರೆ ಅವರ ದೀರ್ಘಕಾಲದ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಆರ್ ಎಂಪಿ ವೈದ್ಯರು ತಲೆಕೆಡಿಸಿಕೊಳ್ಳಲ್ಲ ಎಂದು ಕಿಡಿಕಾರಿದ್ದರು. ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿನ 120 ನಕಲಿ ಕ್ಲಿನಿಕ್ ಗಳ ಪಟ್ಟಿ ಸಿದ್ಧಪಡಿಸಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 120 ನಕಲಿ ಕ್ಲಿನಿಕ್ ಗಳನ್ನು ಮುಚ್ಚಿಸಿದ್ದಾರೆ. ಕೆಪಿಎಂಇ ರಿಜಿಸ್ಟ್ರೇಷನ್ ಇಲ್ಲದಿರುವ ಆಲೋಪತಿ ಚಿಕಿತ್ಸೆ, ಆಯುಷ್ ವೈದ್ಯರಿಗೂ ಶಾಕ್ ಕೊಟ್ಟಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ 17 ವೈದ್ಯರಿಗೆ 25ರಿಂದ 50 ಸಾವಿರ ದಂಡ ವಿಧಿಸಿದ್ದಾರೆ.