ಕರ್ನಾಲ್: ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ 11 ವರ್ಷದ ಬಾಲಕಿಯ ಕಿವಿಕಚ್ಚಿ ತುಂಡರಿಸಿರುವ ಹೃದಯವಿದ್ರಾವಕ ಘಟನೆ ಹರಿಯಾಣದಲ್ಲಿ ನಡೆದಿದೆ.
ಕರ್ನಾಲ್ ಜಿಲ್ಲೆಯ ತಾರವಾಡಿಯಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಬಾಲಕಿಯ ಪೋಷಕರು ದೂರು ನೀಡಿದ್ದಾರೆ. ಕೆಲ ಮಕ್ಕಳು ರಸ್ತೆಯಲ್ಲಿ ಆಟವಾಡುತ್ತಿದ್ದರು. ಈ ವೇಳೆ ಮಕ್ಕಳ ನಡುವೆ ಜಗಳ ಶುರುವಾಗಿದೆ. ಮಕ್ಕಳ ಜಗಳ ಪೋಷಕರವರೆಗೂ ತಲುಪಿದೆ. ಮಕ್ಕಳ ಪೋಷಕರ ನಡುವೆ ವಾಗ್ವಾದ ನಡೆದು ಗಲಾಟೆಯಾಗಿದೆ. ಸ್ಥಳೀಯರೆಲ್ಲ ಸೇರಿ ಗಲಾಟೆ ನಿಲ್ಲಿಸಿದ್ದಾರೆ.
ಜಗಳ ನಿಂತ ಬಳಿಕ ಎಲ್ಲರೂ ಅವರವರ ಮನೆಗಳಿಗೆ ತೆರಳಿದ್ದಾರೆ. ಈ ವೇಳೆ ವ್ಯಕ್ತಿಯೋರ್ವ ಕಂಠಪೂರ್ತಿ ಕುಡಿದು ಬಂದು ಮಹಿಳೆಯೊಬ್ಬರ ಮನೆಗೆ ನುಗ್ಗಿ ಮಹಿಳೆಗೆ ಹೊಡೆದಿದ್ದಾನೆ. ಅಲ್ಲದೇ ಆಕೆಯ ಮಗಳ ಮೇಲೆ ಹಲ್ಲೆ ನಡೆಸಿ ಆಕೆಯ ಕಿವಿಕಚ್ಚಿ ತುಂಡರಿಸಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.
ಸಂತ್ರಸ್ತ ಬಾಲಕಿಯ ತಂದೆ ಈ ಬಗ್ಗೆ ಹೇಳಿಕೆ ನೀಡಿದ್ದು, ಗಲಾಟೆ ಬಳಿಕ ನಾವು ಮನೆಗೆ ಬಂದಿದ್ದೆವು. ನಾನು ಸ್ನಾನಕ್ಕೆ ಹೋಗಿದ್ದ ವೇಳೆ ವ್ಯಕ್ತಿ ಕುಡಿದ ಮತ್ತಿನಲ್ಲಿ ಬಂದು ನನ್ನ ಪತ್ನಿಗೆ ಹೊಡೆದಿದ್ದಾನೆ. ನನ್ನ ಮಗಳ ಕಿವಿ ಕಚ್ಚಿ ತುಂಡರಿಸಿದ್ದಾನೆ. ಅಲ್ಲದೇ ನನ್ನ ಹೆಂಡತಿಗೂ ಕಚ್ಚಿದ್ದಾನೆ ಎಂದು ಆರೋಪಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೋಲೀಸರು ಆರೋಪಿ ವಿನಯ್ ನನ್ನು ಬಂಧಿಸಿದ್ದಾರೆ. ಬಾಲಕಿ ಕುಟುಂಬದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.