ಪಾಟ್ನಾ: ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡಿ ಮಹಿಳೆಯನ್ನೇ ಹತ್ಯೆಗೈದಿದ್ದು, ಮಗಳ ಮೃತದೇಹ ಕಂಡು ಆಘಾತಕ್ಕೊಳಗಾದ ತಾಯಿ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಕಿರುಕುಳ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ವರದಕ್ಷಿಣೆ ಕಿರುಕುಳ ನೀಡಿ ಮಹಿಳೆಯೊಬ್ಬರನ್ನು ಆಕೆಯ ಅತ್ತೆ-ಮಾವ-ಪತಿ ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದು, ಮಗಳ ಸ್ಥಿತಿ ಕಂಡು ಶಾಕ್ ಆದ ತಾಯಿ ಕೂಡ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ಸುರೈನಾ ದೇವಿಯ ಶವವನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಆಸ್ಪತ್ರೆಯಲ್ಲಿ ಮಗಳ ಶವ ನೋಡಿದ ತಾಯಿ ಬಬ್ಲಿ ದೇವಿ ಕಣ್ಣಿರಿಟ್ಟಿದ್ದಾರೆ. ಕೆಲವೇ ಸಮಯದಲ್ಲಿ ಇದ್ದಕ್ಕಿದ್ದಂತೆ ಅವರೂ ಇಹಲೋಕ ತ್ಯಜಿಸಿದ್ದಾರೆ.
ಸುರೈನಾ ಪತಿಗೆ ಸರಿಯಾದ ಕೆಲಸವಿರಲಿಲ್ಲ. ಸಾಲದ್ದಕ್ಕೆ ಪತ್ನಿಗೆ ಕಿರುಕುಳವನ್ನೂ ನಿಡುತ್ತಿದ್ದ. ಅತ್ತೆ-ಮಾವ ಸುರೈನಾಗೆ ವರದಕ್ಷಿಣೆ ತರುವಂತೆ ಪ್ರತಿದಿನ ಪೀಡಿಸುತ್ತಿದ್ದರು. ಅಂತಿಮವಾಗಿ ಅತ್ತೆ-ಮಾವ ಸೊಸೆಯ ಕತ್ತು ಹಿಸುಕಿ ಕೊಲೆಗೈದಿದ್ದಾರೆ. ಭಾಗಲ್ಪುರದ ಜೆ ಎಲ್ ಎನ್ ಆಸ್ಪತ್ರೆಗೆ ಶವವನ್ನು ರವಾನಿಸಿದಾಗ ಆಕೆಯ ತಾಯಿ ಕೂಡ ಆಸ್ಪತ್ರೆಗೆ ತೆರಳಿದ್ದರು. ಮಗಳು ಹೆಣವಾಗಿ ಮಲಗಿರುವುದನ್ನು ಕಂಡು ಬಿಕ್ಕಿಬಿಕ್ಕಿ ಅತ್ತಿದ್ದರು. ಮಗಳ ಸಾವಿನಿಂದ ಆಘಾತಕ್ಕೊಳಗಾದ ಬಬ್ಲಿ ದೇವಿ ಏಕಾಏಕಿ ಕುಸಿದು ಬಿದ್ದಿದ್ದಾರೆ. ಅವರ ಮೆದುಳಿನಲ್ಲಿ ತೀವ್ರರಕ್ತಸ್ರಾವವಾಗಿ ಕೊನೆಯುಸಿರೆಳೆದಿದ್ದಾರೆ.