ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ನಿವಾಸದ ಬಳಿ ನಿಲ್ಲಿಸಿದ ಕಾರನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದು,ಒಂದೇ ಕಾರಿಗೆ 2 ನಂಬರ್ ಪ್ಲೇಟ್ ಹಾಕಿಸಿ ಕಳ್ಳಾಟ ನಡೆಸಿರುವುದು ಬಯಲಾಗಿದೆ.
ಹೌದು. ಡಿಕೆಶಿ ಅವರ ಸದಾಶಿವನಗರದ ನಿವಾಸದ ಸಮೀಪ ನಿಲ್ಲಿಸಿದ್ದ ಐಷಾರಾಮಿ ಫಾರ್ಚೂನರ್ ಕಾರನ್ನು ಪೊಲೀಸರು ಸೀಜ್ ಮಾಡಿಕೊಂಡಿದ್ದಾರೆ. ಕಾರು ಜಪ್ತಿ ಮಾಡಿ 5 ದಿನ ಕಳೆದರೂ ಕೂಡ ಯಾರೊಬ್ಬರು ಕಾರು ತಮ್ಮದು ಎಂದು ಪೊಲೀಸರ ಮುಂದೆ ಬಂದಿಲ್ಲ.
ಕೆಎ 42 –ಪಿ-6606 ನಂಬರ್ ಕಾರನ್ನು ರಾಮನಗರದ ಆರ್ ಟಿ ಒ ಕಚೇರಿಯಲ್ಲಿ ನೋಂದಣಿ ಮಾಡಿಸಲಾಗಿದೆ. ಎ ಮಂಜುನಾಥ್ ಎಂಬುವವರ ಹೆಸರಿನಲ್ಲಿ ಕಾರು ರಿಜಿಸ್ಟರ್ ಆಗಿದೆ. ಇಎಮ್ ಐ ಕಟ್ಟಿಲ್ಲವೆಂದು ನಕಲಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಆದ್ದರಿಂದ ಮಂಜುನಾಥ್ ಗೆ ನೋಟಿಸ್ ನೀಡಿದ್ದಾರೆ.
ಜಪ್ತಿ ಮಾಡಿರುವ ಕಾರಿನ ಅಸಲಿ ನಂಬರ್ ಪ್ಲೇಟ್ ಕೆಎ 42-ಪಿ-6606 ಮರೆಮಾಚಿ ಅದರ ಬದಲಿಗೆ KA 51 MW 6814 ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಒಂದೇ ಕಾರಿಗೆ 2 ನಂಬರ್ ಪ್ಲೇಟ್ ಅಳವಡಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸೆ.7 ರಂದು ಡಿಸಿಎಂ ಡಿಕೆಶಿ ನಿವಾಸದ ಸಮೀಪ ಈ ಕಾರು ಹಲವು ಗಂಟೆಗಳ ಕಾಲ ಅಲ್ಲೇ ನಿಂತಿತ್ತು. ನಂತರ ಯಾರೂ ಕಾರಿನ ಹತ್ತಿರ ಬಾರದ ಹಿನ್ನೆಲೆ ಸಂಚಾರಿ ಪೊಲೀಸರು ಕಾರು ತೆರವು ಮಾಡಿದ್ದರು.