ಬೆಳಗಾವಿ: ಆಸ್ತಿ ಆಸೆಗಾಗಿ ಸ್ವಂತ ತಮ್ಮನ ಹೆಂಡತಿಯನ್ನೇ ಚಾಕುವಿನಿಂದ ಇರುದುಕೊಂದು ವ್ಯಕ್ತಿ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಟಿಳಕವಾಡಿಯ ಮಂಗಳವಾರಪೇಟ್ ನಲ್ಲಿ ನಡೆದಿದೆ.
ಗೀತಾ ಗವಳಿ (45) ಭಾವನಿಂದ ಕೊಲೆಯಾದ ಮಹಿಳೆ. ಗಣೇಶ್ ಗವಳಿ ಕೊಲೆ ಆರೋಪಿ. ಗೀತಾ ಗವಳಿ ಪತಿ ರಂಜಿತ್ ಗವಳಿ ಕೆಲ ವರ್ಷಗಳ ಹಿಂದೆ ಅಕಾಲಿಕ ಮರಣಹೊಂದಿದ್ದರು. ತಮ್ಮನ ಆಸ್ತಿ ಮೇಲೆ ಅಣ್ಣನಿಗೆ ಕಣ್ಣಿತ್ತು. ತಮ್ಮ ರಂಜಿತ್ ಗೆ ಸೇರಿದ ಭೂಮಿ ವಿಚಾರವಾಗಿ ಗಣೇಶ್ ಗವಳಿ ಗೀತಾ ಜೊತೆ ಜಗಳವಾಡುತ್ತಿದ್ದ. ಇದೇ ವಿಚಾರವಾಗಿ ಇಂದು ಬೆಳಿಗ್ಗೆ ಕೂಡ ಗಲಾಟೆಯಾಗಿದ್ದು, ಈ ವೇಳೆ ಚಾಕುವಿನಿಂದ ಗೀತಾ ಗವಳಿ ಮೇಲೆ ಹಲ್ಲೆ ನಡೆಸಲಾಗಿದೆ.
ಆರೋಪಿ ಗಣೇಶ್ 20 ಬಾರಿ ಚಾಕುವಿನಿಂದ ಗೀತಾಳನ್ನು ಮನಬಂದಂತೆ ಇರಿದು ಪರಾರಿಯಾಗಿದ್ದಾನೆ. ರಕ್ತದ ಮಡುವಲ್ಲಿ ಬಿದ್ದಿದ್ದ ಗೀತಾಳನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.