ಕಠ್ಮಂಡು: ಪ್ರತಿಭಟನೆಯ ನೆಪದಲ್ಲಿ ಸಂಭವನೀಯ ಹಿಂಸಾಚಾರ ತಡೆಗಟ್ಟುವ ನಿಟ್ಟಿನಲ್ಲಿ ನೇಪಾಳದಾದ್ಯಂತ ಸೇನೆ ಕರ್ಫ್ಯೂ ಜಾರಿಗೊಳಿಸಿದೆ.
ದೇಶದಾದ್ಯಂತ ಕರ್ಫ್ಯೂ ಜಾರಿಗಳೊಸಿರುವ ಸೇನೆ, ಎಲ್ಲೆಡೆ ಬಿಗಿ ಭದ್ರತೆ ಕೈಗೊಂಡಿದೆ. ಇಂದು ಬೆಳಿಗ್ಗೆಯಿಂದ ಸಂಜೆ 5 ಗಂಟೆಯವರೆಗೂ ಕರ್ಫ್ಯೂ ಜಾರಿಯಲ್ಲಿರಲಿದೆ. ಬಳಿಕ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಕರ್ಫ್ಯೂ ಜಾರಿಗೆ ಬರಲಿದೆ ಎಂದು ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.
ನೇಪಾಳ ರಾಜಧಾನಿ ಕಠ್ಮಂಡು ಸೇರಿದಂತೆ ವಿವಿಧ ನಗರಗಳಿಗೆ ಸೇನೆ ಜಮಾವಣೆಗೊಂಡಿದ್ದು, ಪ್ರತಿಭಟನಾಕಾರರ ಮೇಲೆ ನಿಗಾವಹಿಸಲಾಗಿದೆ. ಯಾವುದೇ ಹಿಂಸಾಚಾರ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ನಿರ್ಬಂಧಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಪ್ರತಿಭಟನೆಗಳು, ವಿಧ್ವಂಸಕ ಕೃತ್ಯಗಳು, ಹಿಂಸಾಚಾರ ಘಟನೆ, ಬೆಂಕಿ ಹಚ್ಚುವುದು, ವ್ಯಕ್ತಿ, ಆಸ್ತಿಗಳ ಮೇಲೆ ದಾಳಿ ನಡೆಸಿದಲ್ಲಿ ಅವುಗಳನ್ನು ಕ್ರಿಮಿನಲ್ ಕೃತ್ಯ ಎಮ್ಡು ಪರಿಗಣಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ದೇಶದ ಭದ್ರತೆಗಾಗಿ ಕರ್ಫ್ಯೂ ಜಾರಿ ಮಾಡಲಾಗಿದ್ದು, ಈ ವೇಳೆ ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳು, ವೈದ್ಯಕಿಯ ಸಿಬ್ಬಂದಿ ಸೇರಿದಂತೆ ಅಗತ್ಯ ಸೇವೆಗಳಲ್ಲಿ ತೊಡಗಿರುವ ವಾಹನಗಳು ಮತ್ತು ಸಿಬ್ಬಂದಿಗಳಿಗೆ ಮಾತ್ರ ಕಾರ್ಯನಿರ್ವಹಿಸಲು ಅನುಮತಿ ಇರಲಿದೆ ಎಂದು ತಿಳಿಸಿದೆ.