ಯಾದಗಿರಿ: ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟ ಜಾಲ ಪತ್ತೆಯಾಗಿದೆ. ಎರಡು ರೈಸ್ ಮಿಲ್ ಗಳ ಮೇಲೆ ದಾಳಿ ನಡೆಸಿದ ಪೊಲೀಸರು ಬರೋಬ್ಬರಿ 1.17 ಕೋಟಿ ಮೌಲ್ಯದ ಅಕ್ಕಿ ಸೀಜ್ ಮಾಡಿರ್ಉವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಅನ್ನಭಾಗ್ಯ ಅಕ್ಕಿಯನ್ನು ಪಾಲಿಶ್ ಮಾಡಿ ವಿವಿಧ ಬ್ರ್ಯಾಂಡ್ ಹೆಸರಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಆಹಾರ ಇಲಾಖೆಯ ಉಪನಿರ್ದೇಶಕ ಅನಿಲ್ ಕುಮಾರ್ ಗುರುಮಿಠಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಗುರುಮಿಠಕಲ್ ಪಟ್ಟಣದ ಹೊರವಲಯದಲ್ಲಿರುವ ನರೇಂದ್ರ ರಾಥೋಡ್ ಹಾಗೂ ಅವರ ಪುತ್ರ ಅಯ್ಯಪ್ಪ ರಾಠೋಡ್ ಅವರ ಲಕ್ಷ್ಮೀ ವೆಂಕಟೇಶ್ವರ ಹಾಗೂ ಲಕ್ಷ್ಮೀ ಬಾಲಾಜಿ ರೈಸ್ ಮಿಲ್ ಗಳ ಮೇಲೆ ದಾಳಿ ನಡೆಸಿದ್ದರು.
ಈ ವೇಳೆ ಮಿಲ್ ನ ಗೋದಾಮಿನಲ್ಲಿ ಸಂಗ್ರಹಿಸಿದ್ದ ಸಾವಿರಾರು ಅಕ್ಕಿ ಚೀಲಗಳು ಪತ್ತೆಯಾಗಿವೆ. ನಿರಂತರ ಮೂರು ದಿನಗಳ ಕಾಲ ಲೆಕ್ಕ ಕಾರ್ಯ ನಡೆಸಲಾಗಿದ್ದು, ಸುಮಾರು 1.17 ಕೋಟಿ ಮೌಲ್ಯದ 4,108 ಕ್ವಿಂಟಾಲ್ ಅಕ್ಕಿ ಸೀಜ್ ಮಾಡಲಾಗಿದೆ. ದಾಳಿ ವೇಳೆ ಪಂಜಾಬ್, ಹರಿಯಾಣ, ತೆಲಂಗಾಣ ಸರ್ಕಾರದ ಹೆಸರಿನಲ್ಲಿಯೂ ಅಕ್ಕಿ ಚೀಲಗಳು ಪತ್ತೆಯಾಗಿವೆ. ಅಷ್ಟೇ ಅಲ್ಲ ಸಿಂಗಾಪುರ, ದುಬೈ ವಿವಿಧ ದೇಶಗಳ ಬ್ರ್ಯಾಂಡ್ ನಲ್ಲಿ ರಫ್ತು ಮಾಡುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.