ಬೆಂಗಳೂರು: ಜಲಸಂಪನ್ಮೂಲ ಇಲಾಖೆ ಮತ್ತು ಬಿಬಿಎಂಪಿ ಇದ್ದ ಸಂದರ್ಭದಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಜೇಷ್ಠತೆ ಆಧಾರದಲ್ಲಿ ಶೀಘ್ರವೇ ಬಿಲ್ ಪಾವತಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ರಾಜ್ಯ ಗುತ್ತಿಗೆದಾರರ ಸಂಘ ಮತ್ತು ಬಿಬಿಎಂಪಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ತಮ್ಮನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅವರು ಆಶ್ವಾಸನೆ ನೀಡಿದ್ದಾರೆ.
ಕಾಮಗಾರಿ ಮುಗಿದು 10 ವರ್ಷಗಳಾದರೂ ಠೇವಣಿ ಮತ್ತು ಭದ್ರತಾ ಹಣವನ್ನು ನೀರಾವರಿ ಇಲಾಖೆ ಅಧಿಕಾರಿಗಳು ಬಿಡುಗಡೆ ಮಾಡಿಲ್ಲ. ನಾಲ್ಕು ನೀರಾವರಿ ನಿಗಮಗಳಲ್ಲಿ ಮೂರು ವರ್ಷದಿಂದ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗಿಲ್ಲ. 50 ಲಕ್ಷದಿಂದ 3 ಕೋಟಿ ರೂ.ವರೆಗೆ ಬಾಕಿ ಬಿಲ್ ಗಳ ಪಾವತಿಸಲು ಆದ್ಯತೆ ನೀಡಬೇಕು. ಕಾಯ್ದೆಯನ್ನು ಪಾಲಿಸದೆ ಬಿಲ್ ಪಾವತಿಸುತ್ತಿದ್ದು, ಜೇಷ್ಠತೆ ಆಧಾರದಲ್ಲಿಯೇ ಪಾವತಿಸಬೇಕು ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಒತ್ತಾಯಿಸಿದ್ದಾರೆ.
ಈ ವೇಳೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಗುತ್ತಿಗೆದಾರರ 50 ಲಕ್ಷ ರೂಪಾಯಿವರೆಗೆ ಬಿಲ್ ಪಾವತಿಗೆ ಕೂಡಲೇ ಆದೇಶಿಸಲಾಗುವುದು. ಠೇವಣಿ, ಭದ್ರತೆ ಹಣ ಬಿಡುಗಡೆಗೆ ಸೂಚಿಸಲಾಗುವುದು. ಬಾಕಿ ಇರುವ ಬಿಲ್ ಪಾವತಿಯನ್ನು ಜೇಷ್ಠತೆ ಆಧಾರದ ಮೇಲೆ ನೀಡಲಾಗುವುದು ಎಂದು ತಿಳಿಸಿದ್ದಾರೆ.