ಕಠ್ಮಂಡು: ನೇಪಾಳದಲ್ಲಿ ಸೋಷಿಯಲ್ ಮೀಡಿಯಾ ನಿಷೇಧ ಖಂಡಿಸಿ ಪ್ರತಿಭಟನೆ ತೀವ್ರಸ್ವರೂಪ ಪಡೆದಿದ್ದು, ಹಿಂಸಾಚಾರಕ್ಕೆ ತಿರುಗಿದೆ. ಘಟನೆಯಲ್ಲಿ ಈವರೆಗೆ 14 ಜನರು ಸಾವನ್ನಪ್ಪಿದ್ದಾರೆ.
ನೇಪಾಳ ಸರ್ಕಾರ ಸಾಮಾಜಿಕ ಮಾಧ್ಯಮ ವೇದಿಕಳ ಮೇಲೆ ನಿಷೇಧ ಹೇರಿದ್ದು, ಇದನ್ನು ಖಂಡಿಸಿ ಯುವಜನತೆ ಪ್ರತಿಭಟನೆ ಆರಂಭಿಸಿದ್ದಾರೆ. ಸೋಷಿಯಲ್ ಮೀಡಿಯಾ ನಿಷೇಧ ತೆಗೆದುಹಾಕಬೇಕು, ದೇಶದಲ್ಲಿ ಹರಡಿರುವ ಭ್ರಷ್ಟಾಚಾರ ಸಂಸ್ಕೃತಿಯನ್ನು ಕೊನೆಗೊಳಿಸಬೇಕು ಎಂದು ಒತ್ತಾಯಿಸಿ ಯುವಕರು ಪ್ರತಿಭಟನೆ ನಡೆಸುತ್ತಿದ್ದು, ಕಠ್ಮಂಡುವಿನಲ್ಲಿ ನಡೆದ ಬೃಹತ್ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಘರ್ಷಣೆಯಲ್ಲಿ 14 ಜನರು ಸಾವನ್ನಪ್ಪಿದ್ದಾರೆ. 87 ಜನರು ಗಾಯಗೊಂಡಿದ್ದಾರೆ.
ಡಮಾಕ್ ಚೌಕ್ ನಿಂದ ಪುರಸಭೆ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆದಿದ್ದು ಅಲ್ಲಿ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಪ್ರತಿಕೃತಿ ದಹಿಸಿ, ಕಚೇರಿಗೆ ಮುತ್ತಿಗೆ ಹಾಕಿ ಬಾಗಿಲುಗಳನ್ನು ಮುರಿಯಲು ಯತ್ನಿಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು, ರಬ್ಬರ್ ಗುಂಡುಗಳನ್ನು ಹಾರಿಸಿದ್ದಾರೆ. ಈ ವೇಳೆ ಓರ್ವ ಪ್ರತಿಭಟನಾಕಾರ ಸಾವನ್ನಪ್ಪಿದ್ದಾರೆ. ಇದರಿಂದ ಪ್ರತಿಭಟನೆ ಉದ್ವಿಗ್ನಗೊಂಡಿದ್ದು, ಬೈಕ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾಕಾರರು ನಿರ್ಬಂಧಿತ ವಲಯವನ್ನು ಉಲ್ಲಂಘನೆ ಮಾಡಿ ಸಂಸತ್ ಆವರಣ ಪ್ರವೇಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪರಿಸ್ಥಿತಿ ಮತ್ತಷ್ಟು ಉದ್ಬಿಗ್ನಗೊಂಡಿದ್ದು, ಪೊಲೀಸರು ಜಲಫಿರಂಗಿ, ಅಶ್ರುವಾಯು, ಮದ್ದುಗುಂಡಿನ ಪ್ರಯೋಗ ಮಾಡಿದ್ದಾರೆ. ಹಿಂಸಾಚಾರ ಭುಗಿಲೆದ್ದ ಪರಿಣಾಮ ಘಟನೆಯಲ್ಲಿ 14 ಜನರು ಬಲಿಯಾಗಿದ್ದಾರೆ. ಈ ಘಟನೆ ಬೆನ್ನಲ್ಲೇ ಪೊಲೀಸರು ಕಂಡಲ್ಲಿ ಗುಂಡು ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.