ನವದೆಹಲಿ: ಹೋಟೆಲ್ ಗಳಿಂದ ಊಟ, ತಿಂಡಿಯನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಜೊಮ್ಯಾಟೋ, ಸ್ವಿಗ್ಗಿ, ಮ್ಯಾಜಿಕ್ ಪಿನ್ ಕಂಪನಿಗಳು ಪ್ರತಿ ಆರ್ಡರ್ ಗಳ ಮೇಲೆ ವಿಧಿಸುವ ಶುಲ್ಕವನ್ನು ಏರಿಕೆ ಮಾಡಿವೆ.
ಹಬ್ಬಗಳ ಸೀಸನ್ ಆರಂಭವಾಗಿರುವ ಈ ಸಂದರ್ಭದಲ್ಲಿ ಮನೆ ಬಾಗಿಲಿಗೆ ಆಹಾರ ಪೂರೈಸುವ ಕಂಪನಿಗಳು ಪ್ಲಾಟ್ಫಾರ್ಮ್ ಶುಲ್ಕ ಹೆಚ್ಚಳ ಮಾಡಿವೆ. ಊಟ ತಿಂಡಿಯನ್ನು ಮನೆಬಾಗಿಲಿಗೆ ತಲುಪಿಸುವ ಸೇವೆಗೆ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಶೇಕಡ 18ರಷ್ಟು ತೆರಿಗೆ ಸೆಪ್ಟೆಂಬರ್ 22 ರಿಂದ ಜಾರಿಯಾಗಲಿದ್ದು, ಅದರ ಹೊರೆ ಕೂಡ ಗ್ರಾಹಕರಿಗೆ ವರ್ಗಾವಣೆಯಾಗಲಿದೆ ಎನ್ನಲಾಗಿದೆ.
ಸ್ವಿಗ್ಗಿ ಕಂಪನಿಯು ಆಯ್ದ ನಗರಗಳಲ್ಲಿ ಪ್ರತಿ ಆರ್ಡರ್ ಗೆ 15 ರೂ.ಗೆ ಪ್ಲಾಟ್ ಫಾರ್ಮ್ ಶುಲ್ಕ ಹೆಚ್ಚಿಸಿದೆ. ಇದರಲ್ಲಿ ಜಿಎಸ್‌ಟಿ ಕೂಡ ಸೇರಿದೆ. ಜೊಮ್ಯಾಟೋ ಜಿಎಸ್‌ಟಿ ಹೊರತುಪಡಿಸಿ 12.50 ರೂಪಾಯಿಗೆ ಶುಲ್ಕ ಹೆಚ್ಚಳ ಮಾಡಿದೆ. ಮ್ಯಾಜಿಕ್ ಪಿನ್ 10 ರೂ.ಗೆ ಶುಲ್ಕ ಹೆಚ್ಚಳ ಮಾಡಿದೆ. ಆಹಾರ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ಸೇವೆಗೆ ಶೇಕಡ 18ರಷ್ಟು ಜಿಎಸ್‌ಟಿಯನ್ನು ಈಗಾಗಲೇ ಪಾವತಿಸಲಾಗುತ್ತಿದ್ದು, ಈಗಿನ ಜಿಎಸ್‌ಟಿ ಪರಿಷ್ಕರಣೆ ಪರಿಣಾಮ ಬೀರುವುದಿಲ್ಲ ಎಂದು ಮ್ಯಾಜಿಕ್ ಪಿನ್ ಕಂಪನಿ ವಕ್ತಾರರು ಹೇಳಿದ್ದಾರೆ.