ಮಂಗಳೂರು: ಧರ್ಮಸಂರಕ್ಷಣಾ ಯಾತ್ರೆ ಆಯೋಜಕರೇ ಅಧರ್ಮದ ಕೆಲಸ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ರಟ್ಟಾಡಿ ಮಣಿಮಕ್ಕಿಯಲ್ಲಿ ನಡೆದಿದೆ.
ಧರ್ಮ ಸಂರಕ್ಷಣಾ ಯಾತ್ರೆ ಆಯೋಜಕ ನವೀನ್ ಚಂದ್ರ ಶೆಟ್ಟಿ, ಧರ್ಮಸ್ಥಳ ಸ್ವಸಹಾಯ ಸಂಘದ ಸೇವಾನಿರತೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಶ್ರೀಕೋಟೆಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿಯ ನವೀನ್ ಚಂದ್ರ ಶೆಟ್ಟಿ, ಧರ್ಮಸ್ಥಳ ಹೆಸರು ಉಳಿಸಲು ಧರ್ಮ ಸಂರಕ್ಷಣಾ ಯಾತ್ರೆ ಆಯೋಜಿಸಿದ್ದಾರೆ. ಧರ್ಮಸ್ಥಳ ಸ್ವಸಹಾಯ ಸಂಘದ ಸೇವಾನಿರತೆ ಯಾತ್ರೆಗೆ ಆಮಂತ್ರ ನೀಡುತ್ತಿದ್ದರು. ಈ ವೇಳೆ ನವೀನ್ ಚಂದ್ರ ಶೆಟ್ಟಿ, ಸೇವಾನಿರತೆಗೆ ಕರೆ ಮಾಡಿ ಮಧ್ಯಾಹ್ನ ನೇರವಾಗಿ ಮನೆಗೆ ಬರುವಂತೆ ಕರೆದಿದ್ದಾರೆ. ಯಾತ್ರೆ ಆಯೋಜಕರು ಮನೆಗೆ ಕರೆದಿದ್ದಾರೆಂದು ಚರ್ಚಿಸಲು ಸೇವಾನಿರತೆ ಮನೆಗೆ ಹೋಗಿದ್ದಾರೆ.
ಈ ವೇಳೆ ನವೀನ್ ಚಂದ್ರ ಶೆಟ್ಟಿ ಸೇವಾನಿರತೆಗೆ ಬಲವಂತವಾಗಿ ಚುಂಬಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ. ನವೀನ್ ಶೆಟ್ಟಿ ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರೂ ಆಗಿದ್ದಾರೆ. ಘಟನೆಯಿಂದ ನೊಂದ ಮಹಿಳೆ ಅಮವಾಸ್ಯೆಬೈಲು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಧರ್ಮಸಂರಕ್ಷಣಾ ಯಾತ್ರೆ ಆಯೋಜಕ ನವೀನ್ ಶೆಟ್ಟಿ ನಾಪತ್ತೆಯಾಗಿದ್ದಾರೆ.