ಬೆಂಗಳೂರು: ವಕೀಲೆ ಮೇಲೆ ಪೊಲೀಸ್ ಕಾನ್ಸ್ಟೇಬಲ್ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ. ಸ್ಪೆಷಲ್ ಆಕ್ಷನ್ ಫೋರ್ಸ್ ನಲ್ಲಿದ್ದ ಸಿದ್ದೇಗೌಡ ವಿರುದ್ಧ ಆರೋಪ ಕೇಳಿ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಯುವ ವಕೀಲೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರಿನ ಬಸವೇಶ್ವರನಗರ ಠಾಣೆ ಪೋಲೀಸರು ಪಿಸಿ ಸಿದ್ದೇಗೌಡನನ್ನ ಬಂಧಿಸಿದ್ದಾರೆ.
ಮಂಗಳೂರಿನ ಪಾಂಡೇಶ್ವರದಲ್ಲಿ ಎಸ್.ಎ.ಎಫ್.ನಲ್ಲಿ ಪಿಸಿ ಸಿದ್ದೇಗೌಡ ಇದ್ದರು. ಸಿದ್ದೇಗೌಡ ವಿಜಯಪುರ ಜಿಲ್ಲೆ ಬಬಲೇಶ್ವರ ಮೂಲದ ಯುವತಿ ಮೇಲೆ ಅತ್ಯಾಚಾರ ಎಸೆಗಿದ ಆರೋಪ ಕೇಳಿ ಬಂದಿದೆ. ಕಾನ್ಸ್ಟೇಬಲ್ ಸಿದ್ದೇಗೌಡ ಬಾಗಲಕೋಟೆ ಜಿಲ್ಲೆ ಜಮಖಂಡಿ ಮೂಲದವರು. ಹುಬ್ಬಳ್ಳಿಯಲ್ಲಿ ಮದುವೆಯೊಂದರಲ್ಲಿ ಯುವತಿ ಮತ್ತು ಸಿದ್ದೇಗೌಡನಿಗೆ ಪರಿಚಯವಾಗಿತ್ತು. ಮೊದಲಿಗೆ ಮದುವೆಯಾಗುವುದಾಗಿ ಹೇಳಿದ್ದ ಆರೋಪಿ ಸಿದ್ದೇಗೌಡ ಮದುವೆಗೂ ಮೊದಲೇ ಯುವತಿಯನ್ನು ಕರೆಸಿಕೊಂಡು ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಬೆಂಗಳೂರಿನ ಕೆಲವು ಕಡೆ ಲಾಡ್ಜ್ ಗಳನ್ನು ಬುಕ್ ಮಾಡಿ ಅತ್ಯಾಚಾರ ಎಸಗಿದ್ದು, ನಂತರ ಜಾತಿ ವಿಚಾರವಾಗಿ ಮದುವೆ ಬೇಡವೆಂದು ಹೇಳಿದ್ದ. ನಿಮ್ಮದು ಕೀಳು ಜಾತಿ. ಮದುವೆಗೆ ನಮ್ಮ ಮನೆಯಲ್ಲಿ ಒಪ್ಪುವುದಿಲ್ಲ ಎಂದು ಹೇಳಿದ್ದ. ಅಲ್ಲದೆ, ಲಕ್ಷಾಂತರ ರೂಪಾಯಿ ಸಾಲ ಪಡೆದು ವಂಚಿಸಿದ್ದ ಬಗ್ಗೆ ಆಗಸ್ಟ್ 8ರಂದು ಬಸವೇಶ್ವರನಗರ ಠಾಣೆಗೆ ವಕೀಲೆ ದೂರು ನೀಡಿದ್ದರು.