ದಾವಣಗೆರೆ: ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದವರಿಗೆ ಗ್ಯಾರಂಟಿ ಯೋಜನೆಯಲ್ಲಿ ಆದ್ಯತೆ ನೀಡುವ ನೀತಿಯನ್ನು ರೂಪಿಸುವ ಅಗತ್ಯವಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅಭಿಪ್ರಾಯಪಟ್ಟಿದ್ದಾರೆ.
ದಾವಣಗೆರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿ, ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಪೋಷಕರಿಗೆ ಗ್ಯಾರಂಟಿ ಯೋಜನೆಯಲ್ಲಿ ಆದ್ಯತೆ ನೀಡುವ ನೀತಿಯನ್ನು ರೂಪಿಸುವ ಅಗತ್ಯವಿದೆ. ಹಾಗಾದಾಗ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿ ಶಾಲೆಗಳು ಅಭಿವೃದ್ಧಿಯಾಗುತ್ತವೆ ಎಂದು ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ 2000 ರೂ. ನೀಡಲಾಗ್ತಿದೆ. ಗೃಹಜ್ಯೋತಿ ಯೋಜನೆಯಡಿ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವವರಿಗೆ ಗ್ಯಾರಂಟಿ ಯೋಜನೆಯಲ್ಲಿ ಆದ್ಯತೆ ನೀಡಬೇಕು. ಆಗ ಗ್ಯಾರಂಟಿ ಯೋಜನೆ ಕೈ ತಪ್ಪುವ ಭಯದಲ್ಲಿ ಫಲಾನುಭವಿಗಳು ಮಕ್ಕಳನ್ನು ಶಾಲೆಗೆ ಸೇರಿಸುತ್ತಾರೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಶಾಸಕ ಬಸವಂತಪ್ಪ ತಿಳಿಸಿದ್ದಾರೆ.