ಬೆಳಗಾವಿ: ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಖಾನಾಪುರ ಬಳಿಯ ಹೋಟೆಲ್ ಒಂದರಲ್ಲಿ ಹೋಟೆಲ್ ಕಾರ್ಮಿಕ ಯುವಕನನ್ನು ಕೂಡಿ ಹಾಕಿ ಚಿತ್ರಹಿಂಸೆ ನೀಡಲಾಗಿದ್ದು, ಗಂಭೀರವಾಗಿ ಹಲ್ಲೆಗೊಳಗಾದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ನಡೆದಿದೆ.
18 ವರ್ಷದ ವೆಂಕಪ್ಪ ಮೈಯೆಕರ್ ಮೃತ ಕಾರ್ಮಿಕ. ಮಾಣಿಕವಾಡಿ ಗ್ರಾಮದ ನಿವಾಸಿ. ವೆಂಕಪ್ಪ ಮೂರು ತಿಂಗಳ ಹಿಂದೆ ಖಾನಾಪುರ ಹೊರವಲಯದ ಸ್ವರಾಜ್ ಹೋಟೆಲ್ ನಲ್ಲಿ ಕೆಲಸಕ್ಕೆ ಸೇರಿದ್ದ. ಆ.20ರಂದು ಯುವಕನ ಮೇಲೆ ಕಳ್ಳತನದ ಆರೋಪ ಹೋರಿಸಿ ಆತನನ್ನು ಹೋಟೆಲ್ ರೂಮ್ ನಲ್ಲಿ ಕೂಡಿ ಹಾಕಲಾಗಿದೆ. ಅಲ್ಲದೇ ಹೋಟೆಲ್ ಮಾಲೀಕ ನಾಗೇಶ್ ಬೆಡರೆ ಹಾಗೂ ಸಹೋದರ ವಿಜಯ್ ಬೆಡರೆ, ಯುವಕನ ಮೇಲೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದಾರೆ.
ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಯುವಕ ಸಾವನ್ನಪ್ಪಿದ್ದಾನೆ. ತನ್ನ ಮಗನ ಸಾವಿನ ಬಗ್ಗೆ ನ್ಯಾಯಕೇಳಲು ಹೋಟೆ ಬಳಿ ಹೋದ ವೆಂಕಪ್ಪನ ಪೋಷಕರಿಗೆ ಹೋಟೆಲ್ ಮಾಲೀಕ ಧಮ್ಕಿ ಹಾಕಿದ್ದಾನೆ. 10 ಸಾವಿರ ರೂಪಾಯಿ ಕೊಟ್ಟು ಬೆದರಿಕೆ ಹಾಕಿ ಕಳುಹಿಸಿದ್ದಾರೆ. ಇದರಿಂದ ಪೋಷಕರು ಪೊಲೀಸರುಗೆ ದೂರು ನೀಡಲು ಹಿಂದೇಟು ಹಾಕುತ್ತಿದ್ದರು. ವಿಚಾರ ತಿಳಿದ ಗ್ರಾಮಸ್ಥರು ಮೃತಯುವಕನ ಪೋಷಕರ ಬೆಂಬಲಕ್ಕೆ ನಿಂತಿದ್ದು, ಖಾನಾಪುರ ಠಾನೆಯಲ್ಲಿ ದೂರು ನೀಡಿದ್ದಾರೆ. ಖಾನಾಪುರ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ.