ಬೆಂಗಳೂರು: ಸರ್ಕಾರಿ, ಅನುದಾನಿತ ಶಾಲೆಗಳು, ಕಾಲೇಜುಗಳು ಮತ್ತು ಹಾಸ್ಟೆಲ್ ಗಳ ಹದಿಹರೆಯದ 19.64 ಲಕ್ಷ ಹೆಣ್ಣು ಮಕ್ಕಳಿಗೆ ಶುಚಿ ಯೋಜನೆಯಡಿ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ಗಳನ್ನು ಖರೀದಿಸಿ ಉಚಿತವಾಗಿ ವಿತರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.
ಪ್ರಸಕ್ತ ಸಾಲಿನಲ್ಲಿ ಈ ಉದ್ದೇಶಕ್ಕೆ 71.83 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಆರೋಗ್ಯ ಇಲಾಖೆ ಸಚಿವ ಸಂಪುಟದ ಸಭೆಯಲ್ಲಿ ಪ್ರಸ್ತಾಪ ಮಂಡಿಸಿದೆ. ಪ್ರತಿ ಫಲಾನುಭವಿಗೆ ತಿಂಗಳಿಗೆ ತಲಾ 10 ಪ್ಯಾಡ್ ಗಳು ಒಳಗೊಂಡ ಒಂದು ಯೂನಿಟ್ ನಂತೆ 12 ತಿಂಗಳ ಅವಧಿಗೆ 2.35 ಕೋಟಿ ಯೂನಿಟ್ ಸ್ಯಾನಿಟರಿ ನ್ಯಾಪ್ಕಿನ್ ಗಳ ಅಗತ್ಯವಿದೆ ಎಂದು ಆರೋಗ್ಯ ಇಲಾಖೆ ಅಂದಾಜಿಸಿದೆ.
ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳು, ಪದವಿ ಪೂರ್ವ ಶಿಕ್ಷಣ ಇಲಾಖೆ ಕಾಲೇಜುಗಳು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಹಾಸ್ಟೆಲ್ ಗಳು ಸೇರಿ ಒಟ್ಟು 19,64,507 ಫಲಾನುಭವಿಗಳಿಗೆ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ಉಚಿತವಾಗಿ ವಿತರಿಸಲಾಗುವುದು.
ಪ್ರತಿ ಯೂನಿಟ್ ಗೆ 30.47 ರೂ. ವೆಚ್ಚವಾಗಲಿದೆ ಎಂದು ಹೇಳಲಾಗಿದ್ದು, ಕೆಟಿಟಿಪಿ ಕಾಯ್ದೆಯ ಪ್ರಕಾರ ನಿಯಮಗಳ ಅನ್ವಯಿಸಿ ಒಟ್ಟು 71.83 ಕೋಟಿ ರೂ. ಅನುದಾನದಲ್ಲಿ ಸ್ಯಾನಿಟರಿ ಪ್ಯಾಡ್ ಖರೀದಿಸಿ ವಿತರಿಸಲು ಪ್ರಸ್ತಾಪಿಸಲಾಗಿದೆ.
2013-14ನೇ ಸಾಲಿನಲ್ಲಿ ಸರ್ಕಾರಿ, ಅನುದಾನಿತ, ವಸತಿ ಶಾಲೆಗಳಲ್ಲಿ ದಾಖಲಾದ ಎಲ್ಲ ಬಾಲಕಿಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ಒದಗಿಸಲು ಶುಚಿ ಯೋಜನೆಯನ್ನು ಆರಂಭಿಸಲಾಗಿತ್ತು. ಕೋವಿಡ್ ನಂತರ ಸ್ಥಗಿತವಾಗಿದ್ದ ಯೋಜನೆ ಕಳೆದ ವರ್ಷದಿಂದ ಮತ್ತೆ ಆರಂಭವಾಗಿದೆ. ಈ ವರ್ಷವೂ ಹದಿಹರೆಯದ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ಗಳನ್ನು ವಿತರಿಸಲಾಗುವುದು.