ಮಂಗಳೂರು: ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ಮಾಡಲು ಮಾನವ ಹಕ್ಕು ಆಯೋಗದ ಅಧಿಕಾರಿಯ ಹೆಸರಲ್ಲಿ ಸುಳ್ಳು ಮತ್ತು ಅವಹೇಳನಕಾರಿ ಮಾಹಿತಿ ಪ್ರಸಾರ ಮಾಡಿದ ಆರೋಪದಡಿ ಸೌಜನ್ಯ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಮದನ್ ಬುಗುಡಿ ಅವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಧರ್ಮಸ್ಥಳದ ಭಕ್ತರಾಗಿರುವ ಕೆ.ಆರ್. ಪ್ರವೀಣ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ದೂರಿನ ಪ್ರಕಾರ ಆರೋಪಿಗಳು ಮಾಧ್ಯಮಗಳ ಎದುರು ಮಾತನಾಡುತ್ತಿದ್ದಾಗ ಮದನ್ ಬುಗುಡಿ ಎಂಬ ವ್ಯಕ್ತಿಯನ್ನು ಮಾನವ ಹಕ್ಕು ಆಯೋಗದ ಅಧಿಕಾರಿ ಎಂದು ಸುಳ್ಳಾಗಿ ಪರಿಚಯಿಸಿದ್ದಾರೆ. ಈ ಮೂವರು ಸೇರಿ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಮತ್ತು ಅಪಮಾನಕಾರಿ ಹೇಳಿಕೆ ನೀಡಿದ್ದಾರೆ ಎಂದು ದೂರು ನೀಡಲಾಗಿದೆ.