ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಮೇಘಸ್ಪೋಟ ಸಂಭವಿಸಿದೆ. ರಾಂಬನ್ ಜಿಲ್ಲೆಯ ರಾಜ್ ಗಢ ತಹಸಿಲ್‌ನಲ್ಲಿ ಮೇಘಸ್ಫೋಟ ಸಂಭವಿಸಿದ ನಂತರ ಕನಿಷ್ಠ ಮೂರು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಮೇಘಸ್ಫೋಟದ ನಂತರ ಇನ್ನೂ ಐದು ಮಂದಿ ಕಾಣೆಯಾಗಿದ್ದಾರೆ ಮತ್ತು ಅವರನ್ನು ಪತ್ತೆಹಚ್ಚಲು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಾಗಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ(ಯುಟಿ) ಅನೇಕ ಮೇಘಸ್ಫೋಟಗಳು ಮತ್ತು ದಿಢೀರ್ ಪ್ರವಾಹಗಳು ಸಂಭವಿಸಿವೆ. ಶುಕ್ರವಾರ, ಬಂಡಿಪೋರಾ ಜಿಲ್ಲೆಯ ಗುರೆಜ್ ಸೆಕ್ಟರ್‌ನಲ್ಲಿ ಮತ್ತೊಂದು ಮೇಘಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಯಾವುದೇ ಜೀವಹಾನಿ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ ಪರಿಸ್ಥಿತಿ ಹದಗೆಟ್ಟಿರುವುದರಿಂದ, ಜಮ್ಮು ಮತ್ತು ಕಾಶ್ಮೀರ ಉಪಮುಖ್ಯಮಂತ್ರಿ ಸುರಿಂದರ್ ಚೌಧರಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಜಮ್ಮು ಪ್ರದೇಶಕ್ಕೆ 2014 ರ ಪ್ರವಾಹದ ನಂತರ ಘೋಷಿಸಲಾದ ರೂ. 80,000 ಕೋಟಿ ಪ್ಯಾಕೇಜ್‌ನ ದುಪ್ಪಟ್ಟು ನೀಡಬೇಕೆಂದು ಒತ್ತಾಯಿಸಿದ್ದಾರೆ.
ಸುಮಾರು 100 ವರ್ಷಗಳಲ್ಲಿಯೇ ಅತ್ಯಂತ ಭೀಕರವಾದ ನೈಸರ್ಗಿಕ ವಿಕೋಪವನ್ನು ಜಮ್ಮು ಎದುರಿಸುತ್ತಿದೆ, ಇದು ಈ ಪ್ರದೇಶದಲ್ಲಿ ಭಾರಿ ವಿನಾಶವನ್ನುಂಟು ಮಾಡಿದೆ. ಈ ಪ್ಯಾಕೇಜ್ ಅನ್ನು ಜಮ್ಮುವಿನ ಪೀಡಿತ ಜನರಿಗೆ ನೇರವಾಗಿ ಒದಗಿಸಬೇಕು ಎಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ, ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಶನಿವಾರ ರಾಜೌರಿ, ರಿಯಾಸಿ, ಜಮ್ಮು, ಉಧಂಪುರ, ಕಥುವಾ ಮತ್ತು ಸಾಂಬಾ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದೆ. ಜೊತೆಗೆ ಜಿಲ್ಲೆಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯು ರಂಬನ್, ಕಿಶ್ತ್ವಾರ್ ಮತ್ತು ದೋಡಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ.
Ramban, J&K | Three people have died due to heavy rains and flash floods in the Rajgad area of Ramban. Two people are reported missing, and a rescue operation is going on: District Administration
— ANI (@ANI) August 30, 2025