ಬೆಂಗಳೂರು: ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(ಕ್ರೈಸ್) ಹಾಸ್ಟೆಲ್ ನ ಶೌಚಾಲಯದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ಹೆರಿಗೆಯಾಗಿದೆ. ಈ ಹಿನ್ನೆಲೆಯಲ್ಲಿ ಕ್ರೈಸ್ ಎಚ್ಚೆತ್ತುಕೊಂಡಿದ್ದು, ಹಾಸ್ಟೆಲ್ ನ ಎಲ್ಲಾ ವಿದ್ಯಾರ್ಥಿಗಳು ವಿಶೇಷವಾಗಿ ಹೆಣ್ಣು ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಬೇಕು. ನಿಯಮಿತವಾಗಿ ಆರೋಗ್ಯ ಪರಿಶೀಲಿಸಬೇಕೆಂದು ಸೂಚನೆ ನೀಡಿದೆ.
ಕ್ರೈಸ್ ವ್ಯಾಪ್ತಿಯ 821ಕ್ಕೂ ಅಧಿಕ ಹಾಸ್ಟೆಲ್ ಗಳಲ್ಲಿ ಮಕ್ಕಳ ಆರೋಗ್ಯ ನೋಡಿಕೊಳ್ಳಲು ನರ್ಸ್ ಗಳನ್ನು ನೇಮಿಸಲಾಗಿದೆ. ಈ ಹಾಸ್ಟೆಲ್ ನಲ್ಲಿ ಕೂಡ ನರ್ಸ್ ಇದ್ದರೂ ಬಾಲಕಿ ಗರ್ಭಿಣಿಯಾಗಿರುವುದು ನರ್ಸ್ ಅಥವಾ ಶಿಕ್ಷಕರ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ವಿಚಾರಣೆ ನಡೆಸಲಾಗಿದೆ.
ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಮಾರ್ಗಸೂಚಿ ಹೊರಡಿಸಲಾಗುವುದು. ಹಾಸ್ಟೆಲ್ ಪ್ರಾಂಶುಪಾಲ ಸೇರಿ ನಾಲ್ವರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ವಿದ್ಯಾರ್ಥಿಗಳು, ಹೆಣ್ಣುಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಿ ನಿಯಮಿತವಾಗಿ ಆರೋಗ್ಯ ಪರಿಶೀಲಿಸಬೇಕೆಂದು ಸೂಚಿಸಲಾಗಿದೆ.