ಕಲಬುರಗಿ: ಅನ್ಯ ಜಾತಿ ಯುವಕನನ್ನು ಪ್ರೀತಿಸುತ್ತಿದ್ದ ಪುತ್ರಿಯಳನ್ನು ತಂದೆಯೇ ಕತ್ತು ಹಿಸುಕಿ ಮರ್ಯಾದೆಗೇಡು ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆ ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಮೇಳಕುಂದಾ(ಬಿ) ಗ್ರಾಮದಲ್ಲಿ ನಡೆದಿದೆ.
ಕವಿತಾ ಕೊಳ್ಳುರ(18) ಕೊಲೆಯಾದ ಯುವತಿ. ಆಕೆಯ ತಂದೆ ಶಂಕರ ಕೊಳ್ಳುರ ಹತ್ಯೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿ ಅದೇ ಅನತ್ಯ ಜಾತಿಯ ಯುವಕ ಆಟೋ ಚಾಲಕನನ್ನು ಪ್ರೀತಿಸುತ್ತಿದ್ದಳು. ಆ ಯುವಕನನ್ನೇ ಮದುವೆಯಾಗುತ್ತೇನೆ. ಇಲ್ಲ ಮನೆ ಬಿಟ್ಟು ಹೋಗುತ್ತೇನೆ ಎಂದು ಪಟ್ಟು ಹಿಡಿದಿದ್ದಳು. ಈ ಬಗ್ಗೆ ಆಗಸ್ಟ್ 27ರಂದು ಯುವತಿ ಮತ್ತು ಕುಟುಂಬದ ನಡುವೆ ಮತ್ತೆ ಗಲಾಟೆಯಾಗಿದೆ. ಪುತ್ರಿ ಅನ್ಯ ಜಾತಿ ಯುವಕನೊಂದಿಗೆ ಹೋದರೆ ಮರ್ಯಾದೆ ಹೋಗುತ್ತದೆ ಎಂದುಕೊಂಡು ತಂದೆ ಹಾಗೂ ಇತರ ಇಬ್ಬರು ಸೇರಿ ಕವಿತಾ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
ನಂತರ ಆಕೆಯ ಬಾಯಿಯಲ್ಲಿ ವಿಷ ಹಾಕಿದ್ದಾರೆ. ವಿಷ ಕುಡಿದು ಮೃತಪಟ್ಟಿದ್ದಾಳೆ ಎಂದು ಸುದ್ದಿ ಹಬ್ಬಿಸಿ ಆಗಸ್ಟ್ 28ರಂದು ಬೆಳಗ್ಗೆ 9 ಗಂಟೆಗೆ ಶವ ಸುಟ್ಟು ಹಾಕಿದ್ದಾರೆ. ಮಾಹಿತಿ ಪಡೆದ ಪೊಲೀಸರು ಯುವತಿಯ ತಂದೆಯನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಸಹಕರಿಸಿದ್ದ ಇಬ್ಬರ ಬಂಧನಕ್ಕೆ ಬಲೆ ಬೀಸಲಾಗಿದೆ. ಫರಹತಾಬಾದ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಕಲಬುರಗಿ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.