ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಆರಂಭಿಸಿರುವ ಶಿಷ್ಯವೇತನ ಸಹಿತ ಕೋರ್ಸ್ ಗಳನ್ನು ಕಾಲೇಜು ಶಿಕ್ಷಣ ಇಲಾಖೆ 68 ಕಾಲೇಜುಗಳಿಗೆ ವಿಸ್ತರಿಸಿದ್ದು, 2700 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಜತೆಗೆ ಮಾಸಿಕ 7 ಸಾವಿರ ರೂ. ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಅಪ್ರೆಂಟಿಸ್ ಶಿಪ್ ಎಂಬೆಡೆಡ್ ಡಿಗ್ರಿ ಪ್ರೋಗ್ರಾಂ ಮತ್ತು ಬೋರ್ಡ್ ಆಫ್ ಅಪ್ರೆಂಟಿಸ್ ಶಿಪ್ ಟ್ರೈನಿಂಗ್ ಜೊತೆ ಕಾಲೇಜುಗಳು ಮಾಡಿಕೊಂಡಿರುವ ಒಪ್ಪಂದ ಪತ್ರಗಳನ್ನು ಅವರು ವಿತರಿಸಿದರು.
ನಂತರ ಮಾತನಾಡಿದ ಸಚಿವ ಸುಧಾಕರ್, ಕಳೆದ ವರ್ಷ 43 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕೋರ್ಸ್ ಆರಂಭಿಸಿದ್ದು, 1432 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಈ ಶಿಷ್ಯವೇತನ ಸಹಿತ ಕೋರ್ಸ್ ಅನ್ನು 68 ಕಾಲೇಜು ಶಿಕ್ಷಣ ಇಲಾಖೆ ವಿಸ್ತರಿಸಿದ್ದು, 2700 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಜೊತೆಗೆ ಮಾಸಿಕ 7,000 ರೂ. ಶಿಷ್ಯವೇತನ ನೀಡಲಾಗುವುದು ಎಂದು ತಿಳಿಸಿದ್ದಾರೆ.