ಕೊಡಗು : ಕೊಡಗಿನಲ್ಲಿ ಪ್ರವಾಸಿಗರಿಗೆ ಹುಡುಗಿಯರು ಲಭ್ಯವಿದ್ದಾರೆ..ಹೀಗಂತ ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಪೋಸ್ಟ್ ಹಂಚಿಕೊಂಡಿದ್ದು, ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರವಾಸಿಗರ ನೆಚ್ಚಿನ ತಾಣ ಕೊಡಗಿನ ಬಗ್ಗೆ ಅಪಪ್ರಚಾರ ಮಾಡುವಲ್ಲಿ ಯಾವುದೋ ಒಂದು ಗುಂಪು ನಿರತವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಡಗಿನಲ್ಲಿ ಪ್ರವಾಸಿಗರಿಗೆ ಹುಡುಗಿಯರು, ಮಹಿಳೆಯರು ಲಭ್ಯವಿದ್ದಾರೆ ಎಂದು ಕಿಡಿಗೇಡಿಗಳು ಪೋಸ್ಟ್ ಹಂಚಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಿಮಗೆ ಹುಡುಗಿಯರು ಬೇಕಾದ್ರೆ ಈ ಕೆಳಕಂಡ ನಂಬರ್ ನ್ನು ಸಂಪರ್ಕಿಸಿ ಎಂದು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ರೆ ಕೊಡಗು ಗೋವಾ, ಥಾಯ್ಲೆಂಡ್ ಮಾದರಿಯ ಕೆಟ್ಟ ಟೂರಿಸಂಗೆ ಹೆಸರು ವಾಸಿಯಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.ಈ ಕೂಡಲೇ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಂಡು ಆರೋಪಿಗಳನ್ನ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೊಡಗು, ಇದು ಪಶ್ಚಿಮ ಘಟ್ಟದ ತಪ್ಪಲಿನ ದಟ್ಟವಾದ ಕಾಡುಗಳಿಂದ ವೈಭವೀಕರಿಸಿದ ಕರ್ನಾಟಕದ ಅತ್ಯಂತ ಸುಂದರ ಗಿರಿಧಾಮವಾಗಿದೆ. ಕೊಡಗಿನ ಕಾಫಿ ಮತ್ತು ಕೊಡಗಿನ “ಕೆಚ್ಚೆದೆಯ ಯೋಧರರು” ಪ್ರಪಂಚದಲ್ಲಿ ಪ್ರಸಿದ್ದಿ ಪಡೆದಿದೆ. ಕೊಡಗಿನ ಸೌಂದರ್ಯ ಸವಿಯಲು ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.