ದಾವಣಗೆರೆ: ಶಿಕ್ಷಕಿ ಡಿಜಿಟಲ್ ಅರೆಸ್ಟ್ ಮಾಡಿ 22.40 ಲಕ್ಷ ಸುಲಿಗೆ ಮಾಡಿದ ಆರೋಪದ ಮೇಲೆ ಹಾಸನ ಜಿಲ್ಲೆಯ ಯುವ ರೈತನನ್ನು ದಾವಣಗೆರೆಯ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೇಲೂರು ತಾಲೂಕಿನ ಕೊರಟಕೆರೆ ಗ್ರಾಮದ ಅರುಣ್ ಕುಮಾರ್(35) ಬಂಧಿತ ಆರೋಪಿಯಾಗಿದ್ದು. ಆತನನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ. 1.90 ಲಕ್ಷ ರೂ. ಇರುವ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
ಫೆಬ್ರವರಿ 5 ರಂದು ಶಿಕ್ಷಕಿಗೆ ಕರೆ ಮಾಡಿದ ಆರೋಪಿಗಳು ಮುಂಬೈನ ಬ್ಲೂ ಡಾಟ್ ಕೊರಿಯರ್ ಹೆಸರಲ್ಲಿ ಪರಿಚಯಿಸಿಕೊಂಡಿದ್ದಾರೆ. ದುಬೈಗೆ ಕಳುಹಿಸುತ್ತಿರುವ ಪಾರ್ಸೆಲ್ ನಲ್ಲಿ ಔಷಧಗಳ ಜೊತೆಗೆ ಮಾದಕ ವಸ್ತು ಪತ್ತೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಬೆದರಿಸಿದ್ದಾರೆ. ಆಧಾರ್ ಕಾರ್ಡ್ ಮತ್ತು ಇಮೇಲ್ ವಿಳಾಸ ಪಡೆದುಕೊಂಡಿದ್ದಾರೆ.
ನಂತರದಲ್ಲಿ ವಾಟ್ಸಾಪ್ ಕಾಲ್ ಮಾಡಿದ ಮಹಿಳೆಯೊಬ್ಬರು ಡಿಸಿಪಿ ಎಂದು ಪರಿಚಯಿಸಿಕೊಂಡು ಶಿಕ್ಷಕಿಯನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ. ಹವಾಲಾ ಹಣ ವರ್ಗಾವಣೆಯಲ್ಲಿ ಬಂಧಿತನಾದ ಆರೋಪಿಯ ಬಳಿ ಶಿಕ್ಷಕಿಯ ಬ್ಯಾಂಕ್ ಖಾತೆ ವಿವರ, ಆಧಾರ್, ಎಟಿಎಂ ಕಾರ್ಡ್ ವಿವರ ಪತ್ತೆಯಾಗಿದೆ ಎಂದು ಬೆದರಿಸಿದ್ದಾರೆ. ಕಾನೂನಾತ್ಮಕ ತೊಡಕು ನಿವಾರಿಸಿ ಪಾರಾಗಲು 22.40 ಲಕ್ಷ ರೂಗಳನ್ನು ಎರಡು ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಮಾರ್ಚ್ 12ರಂದು ಶಿಕ್ಷಕಿ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಡಿವೈಎಸ್ಪಿ ಬಂಕಾಳಿ ನಾಗಪ್ಪ ನೇತೃತ್ವದ ಪೊಲೀಸರ ತಂಡ ಒಬ್ಬ ಆರೋಪಿಯನ್ನು ಬಂಧಿಸಿದೆ. ಮತ್ತಿಬ್ಬರ ಬಂಧನಕ್ಕೆ ಬಲೆ ಬೀಸಲಾಗಿದೆ.